Sunday, January 12, 2014

ಯಾರನ್ನು ಸಿಂಹಾಸನದ ಮೇಲೆ ಕೂರಿಸೆಂದು ಹೇಳುತ್ತಿರುವೆ

ಯಾರನ್ನು ಸಿಂಹಾಸನದ ಮೇಲೆ ಕೂರಿಸೆಂದು ಹೇಳುತ್ತಿರುವೆ
ಖಡ್ಗದ ಮೇಲೆ ವಿಷ ಲೇಪಿಸುವ ಮಾತನಾಡುತ್ತಿರುವೆ

ಅವನ ತಲೆಯ ಮೇಲೆ ಕೊಲೆಯ ಆರೋಪಗಳಿವೆ ಓಹ್ ತಾಯಿಯೆ
ಅವನದೇ ತಲೆಯ ಮೇಲೆ ಕಿರೀಟವಿಡುವ ಮಾತನಾಡುತ್ತಿರುವೆ

ಸಂಗಾತಿಗಳ ಸಮಾಧಿಗಳ ಮೇಲೆ ಈ ಕಟ್ಟಡಗಳು ನಿಂತಿವೆ
ಇತಿಹಾಸವನ್ನು ಹೀಗೆ ಬದಲಿಸುವ ಮಾತನಾಡುತ್ತಿರುವೆ

ಒಂದು ಬೆಳಕಿನ ಕಿರಣಕ್ಕಾಗಿ ಇಲ್ಲಿ ಜೀವಗಳು ಉರಿಯುತ್ತಿವೆ
ಈ ಸತ್ಯವನ್ನು ನೀನು ಮುಚ್ಚಿಡುವ ಮಾತನಾಡುತ್ತಿರುವೆ

ಈಗಲೂ ಕಿವಿಗಳಲ್ಲಿ ಮಾರ್ದನಿಸುತ್ತಿವೆ ಆ ಚೀತ್ಕಾರಗಳು
ಅವುಗಳನ್ನು ಮರೆತು ನಗುವ ಮಾತನಾಡುತ್ತಿರುವೆ

ನೀ ನಡೆವ ಬೀದಿಯಲ್ಲಿ ಹೀಗೆ ರಾಶಿ ಹೆಣಗಳು ಬಿದ್ದಿವೆ
ಅಸ್ಥಿಗಳ ಮೇಲೆ ಹೆದ್ದಾರಿ ನಿರ್ಮಿಸುವ ಮಾತನಾಡುತ್ತಿರುವೆ

ನಿನ್ನ ಇಚ್ಛೆಗೆ ವಿರುದ್ಧವಾಗಿ ಜಗತ್ತು ಬದಲಾಗುತ್ತಿದೆ 'ಸಾಹಿಲ್'
ಮತ್ತೆ ನೀನು ದಿನವೂ ಜಗತ್ತನ್ನೆ ಬದಲಿಸುವ ಮಾತನಾಡುತ್ತಿರುವೆ

ಮೂಲ: ಸಂವರ್ತ ಸಾಹಿಲ್.
ಕನ್ನಡಕ್ಕೆ- ಶಶಿಧರ ಹೆಮ್ಮಾಡಿ.

No comments: