Wednesday, June 19, 2013

ಯಡಿಯೂರಪ್ಪ ಕುಂದಾಪುರಕ್ಕೆ ಬಂದರು


ಯಡಿಯೂರಪ್ಪ ಕುಂದಾಪುರಕ್ಕೆ ಬಂದರು
ಯಡಿಯೂರಪ್ಪ ಕುಂದಾಪುರಕ್ಕೆ ಬಂದರು
ಯೋಜನೆಗಳನ್ನು ತಂದರು
ಅಣೆಕಟ್ಟು, ಕಾಲೇಜು, ಬಂದರು.
ಮಗನ ಲೋಕಸಭಾ ಕ್ಷೇತ್ರ
ವಿಶೇಷ ಸವಲತ್ತಿಗೆ ಪಾತ್ರ.
ಹಲವು ಶಂಕುಸ್ಥಾಪನೆ
ಕೆಲವು ಉದ್ಘಾಟನೆ
ಪುರೋಹಿತರ ಮಂತ್ರ
ಜೆಸಿಬಿ ಯಂತ್ರ.



ಆರೋಗ್ಯ ಕೊಡಲಾಗಲಿಲ್ಲ
ಎಂದು ಶ್ರೀರಾಂ-
ಮುಲುಗದರಿ, ಮರುಗದಿರಿ.
ಇಗೋ ತಂದಿಹೆನು ಆರೋಗ್ಯ ಕಾರ್ಡು
ಜನಜನರಿಗೂ ಜನರಲ್ ವಾರ್ಡು.
ಯಡ್ಡಿ ಹೇಳಿದರು
ಚಡ್ಡಿ ಹಾಕದ ಮಕ್ಕಳ
ತಾಯಂದಿರು ಕೇಳಿದರು.


ಪತ್ರಕರ್ತರ ದಂಡು
ಕೇಳಿದ ಪ್ರಶ್ನೆಗಳ ಕಂಡು
ಮುಖದಲ್ಲಿ ಸಿಡುಕು,
ದೊರೆಗೆ ಕೋಪ ಬಂದರೆ
ಜಾಹೀರಾತಿಗೆ ಕೆಡುಕು.

ದೇವಸ್ಸ್ಥಾನ ಕಂಡಲ್ಲಿ
ಕಾರು ನಿಲುಗಡೆ
ಗ್ರಹಚಾರ ಬಿಡುಗಡೆ.
ಹರಿವಾಣ ಹಿಡಿದು ಹಲ್ಕಿರಿವ ಭಟ್ಟರು
ಆಶೀರ್ವಾದವೋ ಅಮುಲ್ ಬಟರ್ರು.


ನಗರದ ತುಂಬಲ್ಲ ಸೈರನ್ನು ಕಾರುಗಳು
ಕಟೌಟು, ಬ್ಯಾನರು, ಹೂ ಹಾರಗಳು
ಬೆಂಗಾವಲು ವಾಹನದ
ಕಂಗಾಲು ಪೊಲೀಸರು.
ಆಹಾ! ಎಷ್ಟೊಂದು ಭದ್ರತೆ
ಯಡಯೂರಪ್ಪನಿಗೆ
ಅಯ್ಯೊ! ಎಷ್ಟು ಅಭದ್ರತೆ
ನನ್ನ ಸರಕಾರಕ್ಕೆ.
ರಸ್ತೆಯಲ್ಲಿ ಧೂಳು, ಪಾರ್ಟಿ ಹೋಳು
ಮುಖದಲ್ಲಿ ಎದ್ದು ಕಾಣುವ ಗೋಳು.


ಯಡಿಯೂರಪ್ಪ ಕುಂದಾಪುರಕ್ಕ ಬಂದರು
ಗಾಂಧಿ ಮೈದಾನದಲ್ಲಿ ಸೇರಿದರು ಜನ
ದನಗಳೂ ಇದ್ದವು
ಭಾಷಣ ಶುರುವಾಯಿತು.
ಎಲವೋ ವಿಪಕ್ಷವೇ
ನನ್ನ ಮುಟ್ಟು
ಅಬ್ಬಾ! ಎಂತಹ ಸಿಟ್ಟು.
ಪಕ್ಕದಲ್ಲಿ ಶೋಭಾ-
ಯಮಾನವಾದ ಪಕ್ಷದವರೇ
ಈ ಧೈರ್ಯದ ಗುಟ್ಟು.


ಮುಗಿಯುತ್ತಿಲ್ಲ ಭಾಷಣ
ಕುಮಾರಸ್ವಾಮಿ ಕಾರಣ
ಚಚ್ಚಿದರು, ಚುಚ್ಚಿದರು
ಭಾಷಣದಲ್ಲೇ ಕಚ್ಚಿದರು
ಜನರು ಬೆಚ್ಚಿದರು. ಕಾದರು
ಹತ್ತಬೇಕು ಬೇಗ ಲಾರಿ
ಕತ್ತಲಾದರೆ ಕಾಣದು
ಊರ ದಾರಿ


ಸಿಳ್ಳೆಗಳು ಬಿದ್ದವು
ಸೊಳ್ಳೆಗಳು ಎದ್ದವು
ಯಡಿಯೂರಪ್ಪನ ಭಾಷಣ ಮುಗಿಯಿತು
ಜನರು ಚಪ್ಪಾಳೆ ತಟ್ಟಿದರು
ಚಪ್ಪಾಳೆಗಳ ನಡುವೆ ಸಿಕ್ಕು
ಹಲವು ಸೊಳ್ಳೆಗಳು ಸತ್ತವು.
ಚಪ್ಪಾಳೆ ಸಾರ್ಥಕವಾಯಿತು
ಚಪ್ಪಾಳೆ ಸಾರ್ಥಕವಾಯಿತು
ಚಪ್ಪಾಳೆ ಸಾರ್ಥಕವಾಯಿತು.
-ಶಶಿಧರ ಹೆಮ್ಮಾಡಿ
(ಇತ್ತೀಚೆಗೆ ಗೌರಿ ಲಂಕೇಶ್ ಪತ್ರಿಕ್ರ್ಯಲ್ಲಿ ಪ್ರಕಟವಾದ ನನ್ನ ಕವಿತೆ)
ಟಿಪ್ಪಣಿ: ೧.ಈ ಕವನ ಬರೆದದ್ದು ರೇಣುಕಾಚಾರ್ಯನ ತಂಡ ಯಡಿಯೂರಪ್ಪನ ಮೇಲೆ ಸಮರ ಸಾರಿದ ಸಂದರ್ಭದಲ್ಲಿ ಯಡ್ಡಿ ಕುಂದಾಪುರಕ್ಕೆ ಬಂದಾಗ.
೨. ಮಗನ ಲೋಕಸಭಾಕ್ಷೇತ್ರ ಎಂದರೆ ಯಡಿಯೂರಪ್ಪನ ಮಗ ರಾಘವೇಂದ್ರರ ಲೋಕಸಭಾ ಕ್ಷೇತ್ರಕ್ಕೆ ವ್ಯಾಪ್ತಿಯಲ್ಲಿ ಸೇರುವ ಕುಂದಾಪುರ ತಾಲೂಕಿನ ಅರ್ಧ ಭಾಗ.
-ಶಶಿಧರ ಹೆಮ್ಮಾಡಿ