Sunday, January 12, 2014

ಪಶುಪತಿ ಬೆತ್ತಲಾದ ಕಥೆ!



ಪಶುಪತಿ ಬೆತ್ತಲಾದ ಕಥೆ!

ಈ ಕವನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ

ವಂದೇ ಮಾತರಂ, ಹರಿ ಓಂ
ಇದು ನಾನು ಬೆತ್ತಲಾದ ಕಥನ!
ನಾನು ಪಶುಪತಿ ಬಿಟ್ಟ
(ಹೆಸರು ಬದಲಾಯಿಸಿಕೊಂಡಿದ್ದೇನೆ)
ಉಡುಪಿಯವನು, ಉಡುಪಿಲ್ಲದಿದ್ದರೆ
ನಿಮ್ಮ ಹಾಗೆಯೆ ಬೆತ್ತಲಾಗುವವನು.

ನಾನು ಚಿಕ್ಕವನಿದ್ದಾಗ
ನಿಜಕ್ಕೂ ಮಗುವಿನ ಹಾಗೆಯೇ ಇದ್ದೆ.
ಶಾಲೆಯಲ್ಲಿ ತುಂಬಾ ನಗುತ್ತಿದ್ದೆ
ರಫೀಕ್, ಸುಬ್ಬ,ಅಂತೋನಿಯೊಂದಿಗೆ
ಒಂದೇ ಬೆಂಚಿನಲ್ಲಿ ಕೂತು
ಪಾಠ ಕೇಳುತ್ತಿದ್ದೆ. ಅಲ್ಲಿಯ ತನಕ
ನಾನು ನನ್ನ ಹೆಸರಿಗೆ ತಕ್ಕಂತೆ
‘ಪಶು’ ಆಗಿಯೇ ಇದ್ದೆ.
ಗೋಮುಖ ವ್ಯಾಘ್ರನಾಗಿದ್ದು
ಆ ಮೇಲೆಯೆ!

ಕಾಲೇಜು ಸೇರಿದಾಗ
ಹುಡುಗಿಯರ ಬಗ್ಗೆ ಮತ್ತು ಅವರ
ಲಂಗ ದಾವಣಿ ಕುಪ್ಪಸದ ಬಗ್ಗೆ
ಪುಪ್ಪುಸದಲ್ಲಿ ಉಸಿರು ಬಿಗಿಯಾಗುವಷ್ಟು
ಕುತೂಹಲವಿತ್ತು ನನಗೆ.
ಇದೆಲ್ಲ ವಯೋಸಹಜ ಎಂದು
ಆಗ ಭಾವಿಸಿದ್ದ ನನಗೆ
ಅದೊಂದು ಕಾಯಿಲೆಯಾಗಿ ಉಳಿದುಬಿಟ್ಟಿತಲ್ಲ
ಎಂದು ನಂತರ ಅನಿಸತೊಡಗಿತ್ತು.

ಕಾಲೇಜಿನ ಕಾರಿಡಾರ್‌ನಲ್ಲಿ
ಹುಡುಗಿಯರ ಹಿಂದೆ ಸುತ್ತುತ್ತಿದ್ದಾಗ
ಗೆಳೆಯನೊಬ್ಬ ಹೇಳಿದ
NSS ಸೇರು ಮಜಾ ಇರುತ್ತೆ ಅಂತ.
ನನ್ನ ಕಿವಿಗೆ ಅದು ತಪ್ಪಾಗಿ ಕೇಳಿ
ನಾನು RSS ಸೇರಿದೆ.
ನನಗಾಗ ಉಕ್ಕುತ್ತಿದ್ದ ಯೌವ್ವನ
ಸಂಘದಲ್ಲಿ ನನಗೆ ಸಂಗವಾಯ್ತು
ಸ್ವಯಂ ಸೇವಕ ಸಂಘವಾದ ಕಾರಣ
ಎಲ್ಲವೂ ಉಚಿತವಾಗಿಯೇ ಇತ್ತು ಬಿಡಿ.

ಮುಸಲ್ಮಾನರು ಗಂಡಾಂತರ
ಕ್ರೈಸ್ತರು ಮತಾಂತರ ಎಂದೆಲ್ಲ
ನನಗೆ ಅಲ್ಲಿ ಮನವರಿಕೆ ಮಾಡಿದರು.
ಭಾರತೀಯ ಸಂಸ್ಕೃತಿ,
ಮನುಸ್ಮೃತಿ ಮತ್ತನೇಕ ವಿಕೃತಿ
ಕಾಮ ಮೀಮಾಂಸೆ, ಗೋಮಾಂಸೆ
ಎಲ್ಲವನ್ನೂ ನಾನು ಅಲ್ಲಿಯೆ ಕಲಿತೆ.

ಮಂಗಳೂರಿನ ಮಾಧವಿ
ಕಾಟಿಪಳ್ಳದ ಕಾಸಿಮ್ ಜೊತೆ
ಪಾಂಗಾಳದ ಪಾಂಡುರಂಗ ಭವನದಲ್ಲಿ
ಐಸ್‌ಕ್ರೀಮ್ ಮೆಲ್ಲುತ್ತಿದ್ದಾಗ
ಅವರಿಬ್ಬರನ್ನು ಪೊಲೀಸರಿಗೊಪ್ಪಿಸಿ
‘ಲವ್ ಜಿಹಾದ್’ ತಡೆದು
ನಮ್ಮ ಧರ್ಮ ರಕ್ಷಿಸಿದ
ಕೀರ್ತಿ ನನಗೇ ಸಲ್ಲಬೇಕು.

ಪ್ರೇಮಿಗಳ ದಿನ ಬಸ್ಸಿಗೆ ಕಾಯುತ್ತಿದ್ದ
ಜೋಡಿಯ ಮೇಲೆ ದಾಳಿ ಮಾಡಿದಾಗ
ನಾವು ಅಣ್ಣತಂಗಿ ಎಂದು
ಅವರೆಷ್ಟೇ ಹೇಳಿದರೂ
ಅವರ ತಂದೆ ತಾಯಿಯೇ
ಸ್ವತಃ ಪೊಲೀಸ್ ಠಾಣೆಗೆ ಬಂದು
ವಾದ ಮಾಡಿದರೂ
ಹೈದರಾಬಾದ್ ಫೊರೆನ್ಸಿಕ್ ಲ್ಯಾಬ್‌ನಿಂದ
ಡಿಎನ್‌ಎ ರಿಪೋರ್ಟ್ ಬರುವ ತನಕ
ನಾವು ಅವರನ್ನು ಬಿಟ್ಟಿರಲಿಲ್ಲ ಗೊತ್ತಾ?

ನನಗೂ ಮದುವೆಯಾಯ್ತ
ಹೆಂಡತಿಯಂತೂ ಪದ್ಮನಯನಿ.
ಹೀಗೆಲ್ಲಾ ಇರುತ್ತಾ ನನ್ನನ್ನು
ರಾಜಕಾರಣ ಸೆರಗು ಬೀಸಿ ಕರೆಯಿತು
ನಾನು ಪ್ರತಿನಿಧಿಯಾಗಿ ಆಯ್ಕೆಯಾದೆ.
ಜನಸಂಪರ್ಕ ಜಾಸ್ತಿಯಾಯಿತು
ಹೆಂಡತಿ ಮಕ್ಕಳು ಬೋರಾಯಿತು
ಸಖಿಯರ ಸಹವಾಸವೂ ಜೋರಾಯಿತು

ಹೆಂಡತಿಗೆ ನನ್ನ ಬಗ್ಗೆ ಅಸಹನೆ
ಹೆಚ್ಚಾಗಿ, ನನ್ನಿಂದ ಆಕೆ ಹುಚ್ಚಾಗಿ
ಮಹಾನಗರದ ಮಹಡಿಯೊಂದರಲ್ಲಿ
ಪ್ರಾಣ ತೆಗೆದುಕೊಂಡಳು.
ಅಲ್ಲಿಗೆ ನಾನು ಬೆತ್ತಲಾದೆ
ನನ್ನ ಕಥೆ ಮುಗಿಯಿತು
ಜೈಲಿಗೆ ಹೋಗಬೇಕಾಯಿತು
ಎಂದೆಲ್ಲ ಹತಾಶನಾಗಿ ಕೂತಿದ್ದೆ.
ಆದರೆ ನಮ್ಮೂರಿನ ಮೇಷ್ಟ್ರ ಮಗ
ಭಾಸ್ಕರ ಫೆರ್ನಾಂಡಿಸ್ ಅಲ್ಲಿಂ-
ದಿಲ್ಲಿಗೆ ನನ್ನನು ಬಚಾವ್ ಮಾಡಿದವರು.
ಉಕ್ಕಿ ಹರಿದ ಯಮುನೆಯಲ್ಲಿ
ಆ ಪ್ರಕರಣ ಕೊಚ್ಚಿ ಹೋಯಿತು
ಪ್ರಿಯೆಯ ಪದ್ಮ ನಯನ ಮುಚ್ಚಿ ಹೋಯಿತು.

ಸಂಘದವರು ಪ್ರನಿಧಿಗಳಾಗಬೇಕಾದರೆ
ಸದಾ ಸುಳ್ಳು ಹೇಳಬೇಕು
ಜನರನ್ನು ಪ್ರಚೋದಿಸಬೇಕು.
ಜನರ ಭಾವನೆ ಕೆರಳಿಸಬೇಕು
ಕಲ್ಲು ಹೊಡೆಯಬೇಕು
ಕತ್ತಿ ಮಸೆಯಬೇಕು ಎತ್ತಿ ಕಟ್ಟಬೇಕು
ಹೀಗೆಲ್ಲ ಮಾಡಿ ನಾವು ಗೆದ್ದು ಬರಬೇಕು!
ಜನರ ನಿತ್ಯದ ಬದುಕು-ಬವಣೆ
ನಮಗೆ ಚುನಾವಣೆಯ ವಿಷಯವಲ್ಲ
ಎಂದು ಜನರಿಗೂ ಗೊತ್ತು.

ನಾವು ಕಲ್ಲು ಹೊಡೆದಾಗ ಇಲ್ಲಿನ ಚರ್ಚಿಗೆ
ಅದು ಕೇವಲ ಚುನಾವಣೆಯ ಖರ್ಚಿಗೆ
ಎಂದು ಮಾನ ಉಳಿಸಿದ ಫೆರ್ನಾಂಡಿಸ್‌ಗೂ
ಮತ್ತು ಅವರ ಫೆವಿಕಾಲ್ ಹೆಂಡತಿಗೂ
ಹೇಳಿ ಸಮಧಾನಪಡಿಸಿದ್ದೆ.

ದನಪಾಲ ಚೂರ್ಣ ನನ್ನ ಸಂಘದ ಗೆಳೆಯ,
ಒಂದು ದಿನ ಹೊತ್ತು ಕಂತುವ ಹೊತ್ತಿನಲ್ಲಿ
ಆತ ಫೋನ್ ಮಾಡಿ ಹೇಳಿದ.
ದನ ಸಾಗಾಟ ಮಾಡುತ್ತಿದ್ದ
ಟೆಂಪೋ ಅಡ್ಡ ಹಾಕಿದ್ದೇವೆ
ಹಾಜಬ್ಬ ಹಸನಬ್ಬರನ್ನು ಥಳಿಸಿದ್ದೇವೆ
ಗೋಮಾತೆಯನ್ನು ತಲುಪಬೇಕಾದ
ಜಾಗಕ್ಕೆ ಕಳಿಸಿದ್ದೇವೆ
ಸ್ವಲ್ಪ ಮಾಂಸವನ್ನೂ ಉಳಿಸಿದ್ದೇವೆ
ಇನ್ನೇನು ಮಾಡಲಿ ಎಂದು ಕೇಳಿದ.
ನಾನು ತಕ್ಷಣ ಅಲ್ಲಿಗೆ ಧಾವಿಸಿದೆ.

ಇಬ್ಬರ ಅಂಗಿ ಆಗಲೇ ಕಳಚಿತ್ತು
ನಾನು ಲುಂಗಿಯನ್ನೂ ಕಿತ್ತು ಬಿಸಾಡಿ
ಎಂದು ಆದೇಶ ನೀಡಿದೆ ಮತ್ತು ನೋಡಿದೆ
ಹಾಜಬ್ಬ ಹಸನಬ್ಬ ಇಬ್ಬರೂ ಬೆತ್ತಲೆ!
ವಯಸ್ಸಿಗೆ ಮೀರಿದ ಮುಪ್ಪು
ಸುಕ್ಕುಗಟ್ಟಿದ ಕೈಕಾಲು,
ನಮ್ಮ ಕಾರ್ಯಕರ್ತರ ಒದೆ ತಿಂದು
ರಕ್ತ ಒಸರುತ್ತಿರುವ ಗಾಯಗಳು
ಬೆನ್ನಿಗೆ ಅಂಟಿಕೊಂಡ ಹೊಟ್ಟೆ
ಮುಖದಲ್ಲಿ ಅಸಹಾಯಕ ರೋದನ.
ಆರವತ್ತು ದಾಟಿದ ಮೇಲೆ
ನನ್ನ ಶಿಶ್ನವೂ ಹೀಗೆಯೆ ಸೊರಗಿದರೆ
ಎಂದು ಕಲ್ಪಿಸಿಕೊಂಡು ಒಮ್ಮೆ ದಂಗಾದೆ.

೨.
ಎಲ್ಲವನೂ ಮರೆತು
ಮೊನ್ನೆ ಟಿವಿ ನೋಡುತ್ತಾ ಕೂತಿದ್ದೆ.
ಅದ್ಯಾವುದೋ ಒಂದು ಚಾನೆಲ್‌ನಲ್ಲಿ
ನನ್ನ ಹಾಗೆಯೆ ಕಾಣುವ ಒಬ್ಬ ಮನುಷ್ಯ
ಹಾಸಿಗೆಯ ಬಳಿ ನಗ್ನವಾಗಿ ನಿಂತಿದ್ದ.
ಹೌದು ಅಪ್ಪಟ ನನ್ನ ಹಾಗೆಯೇ ಇದ್ದ.
ಜಗತ್ತಿನಲ್ಲಿ ಒಂದೇ ರೀತಿ ಕಾಣಿಸುವ
ಏಳು ಜನರು ಇರುತ್ತಾರೆ ಎಂದು
ಅಮ್ಮ ಹೇಳಿದ್ದು ನೆನಪಾಯಿತು.
ಹಾಗಾದರೆ ಅದು ನಾನಲ್ಲ ಎಂದು
ನನಗೆ ನಾನೇ ಸಮಾಧಾನ ಹೇಳಿದೆ.
ಆದರೆ ಟಿವಿಯಲ್ಲಿದ್ದ ನಗ್ನ ಮಾನವ
ಕಳಚಿಟ್ಟ ಬಟ್ಟೆಗಳು ನನ್ನದೇ!
ಬಿಳಿ ಪಾಯಿಜಾಮ, ಅದೇ ಬಣ್ಣದ ಕುರ್ತಾ
ಮತ್ತು ಕ್ಯಾಲ್ವಿನ್ ಕ್ಲೇನ್ ಕಂಪೆನಿಯ
ಕೇಸರಿ ಲಂಗೋಟಿ!

ಹಾಸಿಗೆಯಲ್ಲೊಬ್ಬಳು ಚೆಂದದ ಹುಡುಗಿ
ನನ್ನನ್ನು ಕಂಡು ಅಸಹ್ಯಪಟ್ಟು
ನೀನು ಮನುಷ್ಯನಂತೆ ಕಾಣಿಸುತ್ತಿಲ್ಲ
ಎಂದು ಓಡಿ ಹೋಗಿ
ಬಾತ್‌ರೂಮ್‌ನಲ್ಲಿ ಅವಿತುಕೊಂಡಳು.
ನಾನು ಆಗಲೂ ಬೆತ್ತಲೆ ನಿಂತಿದ್ದೆ.

ಟಿ.ವಿಯಲ್ಲಿ ಬಂದವನು ನಾನೇ ಇರಬಹುದೇ
ಎಂಬ ಅನುಮಾನ ಬಂದು ಮೈಬೆವರಿತು.
ನಾನು ಇಷ್ಟು ಬೇಗ ಬೆತ್ತಲಾಗಿಬಿಟ್ಟೆನೆ
ಎಂದು ಕುಳಿತಲ್ಲೇ ಕಂಪಿಸಿದೆ.
ಕನ್ನಡಿ ಎದುರು ಬಂದು ನಿಂತೆ
ಬಟ್ಟೆಗಳನ್ನು ಕಳಚಿ ಎಸೆದೆ.
ಕನ್ನಡಿಯೊಳಗೆ ನನ್ನಂತೆಯೆ ಒಬ್ಬನಿದ್ದ
ಮೈ ತುಂಬಾ ರೋಮಗಳು
ರಕ್ತ ಬೆವರಿನ ವಾಸನೆ
ಆ ಹುಡುಗಿ ಹೇಳಿದ್ದು ನಿಜವೇ ಇರಬೇಕು
ನಾನು ಮನುಷ್ಯನಂತಿಲ್ಲ
ಮೃಗದಂತೆ ಕಾಣಿಸುತ್ತಿದ್ದೇನೆ

ಕನ್ನಡಿಯಲ್ಲಿ ನನ್ನ ಬಿಂಬದ ಹಿಂದೆ
ಇಬ್ಬರು ಇಣುಕುತ್ತಿದ್ದಾರೆ
ನನ್ನನ್ನು ನೋಡಿ ನಗುತ್ತಾ
ಮುಖ ಮುಚ್ಚಿಕೊಳ್ಳುತ್ತಿದ್ದಾರೆ!
ಕಣ್ಣುಜ್ಜಿಕೊಂಡು ನೋಡಿದೆ, ಇದು ಕನಸಲ್ಲ
ಇಬ್ಬರೂ ಶ್ವೇತ ವಸ್ತ್ರಧಾರಿಗಳು
ನನ್ನ ತಂದೆಯ ಪ್ರಾಯದವರು
ಅವರಂತೆಯೆ ಬಿಳಿಯಾದ ಪಂಚೆ
ಮತ್ತು ಅರ್ಧ ತೋಳಿನ ಬಿಳಿ ಅಂಗಿ.
ಆ ಮುಖಗಳ ನೆನಪಾಗಿ ಬೆಚ್ಚಿ ಬಿದ್ದೆ.
ಅಯ್ಯೋ ಈ ಕನ್ನಡಿಯಲ್ಲಿ
ನನ್ನ ಹಿಂದೆ ಇರುವುದು ಹಾಜಬ್ಬ ಹಸನಬ್ಬ.
ಅಂದು ನನ್ನೂರ ನಡುಬೀದಿಯಲ್ಲಿ
ನಾನೇ ಅವರನ್ನು ಬೆತ್ತಲು ಮಾಡಿದ್ದೆ.
ಈಗ ನಾನು ಜಗತ್ತಿನ ಎದುರು
ಸಂಪೂರ್ಣ ನಗ್ನವಾಗಿ ನಿಂತಿದ್ದೇನೆ.

ತಂತ್ರಜ್ಞಾನ ಎಷ್ಟೊಂದು ಮುಂದುವರಿದಿದೆ
ನಾನು ಎಷ್ಟು ಬೇಗ ಬೆತ್ತಲಾದೆ
ನಾನು ಎಷ್ಟು ಬೇಗ ಬೆತ್ತಲಾದೆ.
-ಶಶಿಧರ ಹೆಮ್ಮಾಡಿ, ಕುಂದಾಪುರ




















No comments: