Sunday, January 12, 2014

ಇವನೀಗ ಅಲ್ಲಿದ್ದಾನೆ

ಇವನೀಗ ಅಲ್ಲಿದ್ದಾನೆ
.
ಮೊನ್ನೆಯಷ್ಟೇ
ಬಜರಂಗದಳದ ಮೆರವಣಿಗೆಯಲ್ಲಿ
ಇವನು ಗಂಟಲು ಬಿರಿಯುವ ಹಾಗೆ
ಘೋಷಣೆಗಳನ್ನು ಕೂಗುತ್ತಿದ್ದ.
ನಾನು ಕೊಟ್ಟ ಸೌಹಾರ್ದ ದೀಪಾವಳಿಯ
ಆಹ್ವಾನ ಪತ್ರಿಕೆ ಹರಿದು ಹಾಕಿ
ಸಾಬರೊಂದಿಗೆ, ಕ್ರೈಸ್ತರೊಂದಿಗೆ
ದೀಪಾವಳಿಯೇ..
ಸಲ್ಲದು ಸಲ್ಲದು
ಎಂದು ಹಲ್ಲು ಮಸೆದಿದ್ದ.

ಜಗತ್ತಿನಾದ್ಯಂತದ ಸಾಬರನ್ನು,
ಊರಿನ ಪಾದ್ರಿಗಳನ್ನು
ಪದೇಪದೇ ಗೇಲಿ ಮಾಡಿದ್ದ.
ಪಕ್ಕದ ಮನೆಯ ಸಾಬರ ಹುಡುಗ
ಅವರ ಪಕ್ಕದ ಮನೆಯ ಸುಂದರಿಗೆ
ಲೈನ್ ಹೊಡೆದಿದ್ದಕ್ಕೆ ಇವನು
ಆತನಿಗೆ ಹೊಡೆದಿದ್ದ.
ಇವನ ಜಾತಿಯ ರಾಧಿಕಾ
ಅವರ ಜಾತಿಯ
ಸಾದಿಕನನ್ನುಪ್ರೀತಿಸಿದಾಗ
ಮದುವೆಯಾಗದಂತೆ ತಡೆದಿದ್ದ
ಹೀಗೆಲ್ಲ ತುಂಬಾ ಹೆಸರು ಪಡೆದಿದ್ದ.

ಭಾರತದಲ್ಲಿ ಬರಕ್ಕೆ  ಬಡತನಕ್ಕೆ
ಬಾಬರನೇ ಕಾರಣ
ಎಂದು ನಂಬಿದ್ದ.
ಕಾಪು ಮಸೀದಿಗೆ
ಕಲ್ಲು ಹೊಡೆದವರ ಪಟ್ಟಿಯಲ್ಲಿ
ಇವನಿದ್ದರೂ ಪೊಲೀಸರಿಂದ
ತಪ್ಪಿಸಿಕೊಂಡಿದ್ದ.
ಇಗರ್ಜಿಗೆ ಹೋಗುವ
ಮೇರಿಗೆ ಮೊಂಬತ್ತಿ ಬೆಳಗುವ
ಹಿಂದೂಗಳನ್ನು ಕಂಡರೆ
ಸಿಟ್ಟಾಗುತ್ತಿದ್ದ.
ಕ್ರೈಸ್ತರ ಗೆಳೆತನ ಮಾಡಿದರೆ
ಮತಾಂತರವಾಗುತ್ತೀರಿ
ಎಂದು ಹೆದರಿಸಿದ್ದ.

ಕಲ್ಲಡ್ಕ ಪ್ರಭಾಕರ ಭಟ್ಟರು
ಅಂಕದಕಟ್ಟೆ ರಾಮಣ್ಣ ಶೆಟ್ಟರು
ತನಗೆ ಆದರ್ಶ ಎಂದು ನಂಬಿದ್ದ.
ಧರ್ಮ ರಕ್ಷಣೆಯ ಪಾಠವನ್ನು
ಗೆಳೆಯರಿಗೆ ಬೋಧಿಸಿದ್ದ.
ಸಂಗಾತಿಗಳ ಪಡೆಯನ್ನೇ ಕಟ್ಟಿದ್ದ
ತೊಡೆಯನ್ನೂ ತಟ್ಟಿದ್ದ
ಗರ್ವದಿಂದ ಘರ್ಜಿಸು ಎಂದು
ಹೂಂಕರಿಸಿದ್ದ.

ಮೊನ್ನೆ ಅಚಾನಕ್ ಆಗಿ
ಇವನ ಅಪ್ಪನ ಬಾಲ್ಯದ ಗೆಳೆಯ
ಇಮ್ಯಾನುಯೆಲ್ ಸಿಕ್ವೇರಾ
ಇವನಿಗೆ ವೀಸಾ ಕಳಿಸಿಕೊಟ್ಟರು.
ಸೌದಿ ಅರೇಬಿಯಾದಲ್ಲಿ ಕೆಲಸ
ಆರವತ್ತು ಸಾವಿರ ಸಂಬಳ
ಎರಡು ವರ್ಷಕ್ಕೆ ಮೂರು ತಿಂಗಳು ರಜೆ.
ಹೋಗೋದು ಬರೋದು ಎಲ್ಲ ಖರ್ಚು
ಅವರದ್ದೆ. ಅದೂ ವಿಮಾನದಲ್ಲಿ!

ಈಗ ಇವನಿಗೆ ಸೌದಿ ಅರೇಬಿಯಾದ
ಸಾಬರ ಕಂಪೆನಿಯಲ್ಲಿ ಉದ್ಯೋಗ.
ಶುಕ್ರವಾರ ರಜೆ, ರಮ್ಜಾನ್‌ನಲ್ಲಿ ಉಪವಾಸ.
ಸೊರಬದ ಇಬ್ಬರು ಸಾಬರು
ಕಂಕನಾಡಿಯ ಇಬ್ಬರು ಕ್ರೈಸ್ತರ ಜೊತೆಗೆ
ಈಗ ಇವನ ವಾಸ.
ಮನೆಗೆ ಇಪ್ಪತ್ತು ಸಾವಿರ ಕಳಿಸುತ್ತಾನೆ
ಉಳಿದದ್ದನ್ನು ಉಳಿಸುತ್ತಾನೆ.
ಉರಿನಲ್ಲೀಗ ಇವನ ಅಪ್ಪ
ಹೊಸ ಮನೆಗೆ ಪಂಚಾಂಗ ಹಾಕಿದ್ದಾರೆ
ತಮ್ಮ ಕನಸಿನ ಡಾಬರ್ಮನ್
ನಾಯಿಯನ್ನೂ ಸಾಕಿದ್ದಾರೆ.

ಇತ್ತ ಊರಲ್ಲಿ ಇವನನ್ನು ನಂಬಿದ್ದ
ಕಲ್ಲು ಹೊಡೆದಿದ್ದ, ಶಿಲುಬೆ ಮುರಿದಿದ್ದ
ಪೊಲೀಸರಿಂದ ಒದೆ ತಿಂದಿದ್ದ ಗೆಳೆಯರು
ಇವನ ಹೆಸರು ಎತ್ತಿದರೆ
ಮೋಸ ಮೋಸ
ಎಂದು ಊರೆಲ್ಲ ಹೇಳಿಕೊಂಡು
ಇವನಿಗೆ ಹಿಡಿಶಾಪ ಹಾಕುತ್ತಾ
ಉರಿಯುತ್ತಾ ಅಲೆಯುತ್ತಿದ್ದಾರೆ.
-ಶಶಿಧರ ಹೆಮ್ಮಾಡಿ

No comments: