Monday, June 29, 2009

ರಾತ್ರಿ, ಚಂದಿರ ಮತ್ತು ನಾನು

ಅದು ಸದ್ದಿಲ್ಲದ ನೀರವ ರಾತ್ರಿ
ಆ ರಾತ್ರಿ ಗಾಢ ಮೌನ ಕವಿದಿತ್ತು
ಯಾವ ನೆರಳೂ ಇಲ್ಲ
ಪಿಸುಮಾತುಗಳಿಲ್ಲ
ಇರಲಿಲ್ಲ ಗದ್ದಲ, ಎಲ್ಲವೂ ಸ್ತಬ್ದ.

ಆದರೆ
ಆ ರಾತ್ರಿ ಬಹಳ ಹೊತ್ತಿನ ತನಕ
ಬಂಗಲೆಯ ಎರಡನೆ ಮಹಡಿಯಲ್ಲಿ
ಮಿನುಗುತ್ತಿದ್ದ ಒಂದು ಕಿಟಕಿ
ಮತ್ತು ಆಗಸದಲ್ಲಿದ್ದ ಚಂದಿರ
ಒಬ್ಬರನ್ನೊಬ್ಬರು ನೋಡುತ್ತಲೇ ಇದ್ದವು
ರೆಪ್ಪೆ ಮಿಟುಕಿಸದೆ.

ರಾತ್ರಿ, ಚಂದಿರ ಮತ್ತು ನಾನು
ಮೂವರು ಅಲೆಮಾರಿಗಳು
ನಿನ್ನ ತೇವಗೊಂಡ ಕಣ್ಣುಗಳಲ್ಲಿ
ಹೊತ್ತು ಕಳೆಯುತ್ತಿದ್ದೇವೆ.

ಚಂದಿರ; ಮತ್ತೆ ಮುಡಿದ್ದಾನೆ
ಎಚ್ಚರಿಕೆಯಿಂದ
ನೀನು ತಣ್ನನೆಯ ನಡುರಾತ್ರಿ
ಕಿಟಕಿಯ ಬಳಿ ಬರುತ್ತಿಯಲ್ಲ
ಹಾಗೆ!
ಚಂದಿರನಿಗೂ ಭೂಮಿಗೂ
ಅದೇನೋ ಸೆಳೆತವಿರಬಹುದೆ?

ರಾತ್ರಿ, ಚಂದಿರ ಮತ್ತು ನಾನು
ದಿನವೂ ಭೇಟಿಯಾಗುತ್ತೇವೆ
ನಿನ್ನ ದನಿಯಲ್ಲೇ ಮಾತನಾಡುತ್ತೇವೆ
ಬಹು ದೂರದ ತನಕ

ನಕ್ಷತ್ರಗಳು ಚಂದಿರನ ದೋಣಿಯಲ್ಲಿ
ರಾತ್ರಿಯನ್ನು ಹೊತ್ತು ತಂದಿವೆ
ಬೆಳಕು ಹರಿಯುವುದರೊಳಗೆ
ಎಲ್ಲವೂ ಬಿಕರಿಯಾಗುತ್ತವೆ
ಬೆಳದಿಂಗಳ ವ್ಯಾಪಾರ
ಈ ದಿನಗಳಲ್ಲಿ ಸೊಗಸಾಗಿದೆ.

ನದಿಯ ನೀರಿನ ಜುಳುಜುಳು
ಅದೇನೊ ಹೇಳುತ್ತಿದೆ
ಅಂಬಿಗರು ದಡಬಿಟ್ಟು
ಬಹಳ ಹೊತ್ತಾಗಿದೆ
ಬಾ, ಚಂದಿರನ ದೋಣಿಯಲಿ
ಆ ದಡಕ್ಕೆ ಸಾಗೋಣ.

ರಾತ್ರಿ, ಚಂದಿರ ಮತ್ತು ನಾನು
ಚಳಿಚಳಿಯ ನದಿಯ
ತಣ್ಣನೆಯ ನೀರಿನಲ್ಲಿ ಮುಳುಗಿ
ಹೊಳೆ ದಾಟುತ್ತಿರುತ್ತೇವೆ.
ಮೂಲ: ಗುಲ್ಝಾರ್
ಕನ್ನಡಕ್ಕೆ: ಶಶಿಧರ ಹೆಮ್ಮಾಡಿ