Friday, August 15, 2008

ನೆನಪುಗಳ ಜಾಡು ಹಿಡಿದು ಮತ್ತೆ ಬರುವೆಯ ನನ್ನ ಹಾಡುಗಾರ?

ಆತ ಮತ್ತೆ ಮತ್ತೆ ಏಕೆ ನೆನಪಾಗುತ್ತಾನೆ? ನನ್ನ ಮನದ ಮೂಲೆಯಲ್ಲಿ ಅವನ ಅಂತಹ ಚಿತ್ರವೊಂದು ಅಚ್ಚಳಿಯದೆ ಯಾಕೆ ಹಾಗೆಯೆ ಉಳಿದುಕೊಂಡಿದೆ? ಆತ ಯಾರು? ಎಲ್ಲಿಯವನು? ಎಂಬ ಪ್ರಶ್ನೆಗಳಿಗೆ ನನ್ನ ಬಳಿ ಸಮರ್ಪಕ ಉತರಗಳಿಲ್ಲ. ಆದರೂ ಆತ ಹೀಗೆಯೇ ನೆನಪಾಗುತ್ತಾನೆ, ಕಾಡುತ್ತಾನೆ.
ನಾನಾಗ ಪ್ರೈಮರಿಯಲ್ಲಿ ಓದುತ್ತಿದ್ದೆ. ಡಿಸೆಂಬರ್ ತಿಂಗಳ ಚಳಿಯ ಒಂದು ದಿನ ಬೆಳಿಗ್ಗೆ ಆತನನ್ನು ನಾನು ಮೊದಲ ಬಾರಿ ನೋಡಿದ್ದು. ಹಾಸಿಗೆಯಿಂದ ಎದ್ದು ಕಣ್ಣುಜ್ಜಿಕೊಳ್ಳುತ್ತ ಹೊರಬಂದೆ. ನನ್ನ ತಂದೆ ನಡೆಸುತ್ತಿದ್ದ ಕ್ಯಾಂಟೀನಿನ ಮೊದಲ ಬೆಂಚಿನಲ್ಲಿ ಆತ ಕುಳಿತಿದ್ದ. ನೀಳಕಾಯದ ವ್ಯಕ್ತಿ. ಕೋಲು ಮುಖ. ಮುಖದಲ್ಲಿ ಅಲ್ಲಲ್ಲಿ ಅಸ್ತವ್ಯಸ್ತ ಚದುರಿದ ಗಡ್ಡ, ಕೊಳಕು ಜುಬ್ಬ, ಅದರ ಮೇಲೆ ಒಂದೊ ಎರಡೊ ಕೋಟು, ಅಷ್ಟೆ ಕೊಳಕಾದ ಪಾಯಿಜಾಮ ಧರಿಸಿದ್ದ. ಕೂದಲಿಗೆ ಎಣ್ಣೆ ಹಚ್ಚಿ ನೀಟಾಗಿ ಬಾಚಿಕೊಂಡಿದ್ದ. ನಮ್ಮೂರಿನಲ್ಲಿ "ಇಮಾಮ್ ಸಾಯ್ಬ್ರು" ಎಂದು ನಾವು ಕರೆಯುತ್ತಿದ್ದ ವ್ಯಕ್ತಿಗೂ ಈ ವ್ಯಕ್ತಿಗೂ ಹೆಚ್ಚಿಗೆ ವ್ಯತ್ಯಾಸ ನನಗೆ ಕಾಣಲಿಲ್ಲ. ಇಮಾಮ್ ಸಾಯ್ಬ್ರು ದಪ್ಪ ಬೆಲ್ಟ್ ಹಾಕಿ ಲುಂಗಿ ಧರಿಸುತ್ತಿದ್ದರು ಅಷ್ಟೆ (ಆ ಬೆಲ್ಟಿನಲ್ಲಿಯೇ ಅವರ ಪರ್ಸ್ ಕೂಡ ಇರುತ್ತಿತ್ತು, ಜೊತೆಗೆ ಪುಡಿ ಅಂಡೆ, ಬೀಡಿ ಕಟ್ಟು ಇತ್ಯಾದಿ). ಈ ಹೊಸ ಇಮಾಮ ಎಲ್ಲಿಂದ ಬಂದ ಅಂತ ನಾನು ಯೋಚಿಸುತ್ತಿರುವಂತೆಯೆ ಆತ ನನ್ನನ್ನು ನೋಡಿ ಬಾಯ್ತುಂಬಾ ನಕ್ಕು ಬಿಟ್ಟ. ನಾನೂ ನಕ್ಕೆ. ಆತನ ನಗು ಮಾತ್ರ ನಿಲ್ಲಲೇ ಇಲ್ಲ. ಆತ ಮರಾಠಿಯಲ್ಲಿ (ಮರಾಠಿ ಎಂದು ತಿಳಿದದ್ದು ಆಮೇಲೆ) ಇದೇನು ಎಂದು ನನ್ನ ಮುಖದತ್ತ ಬೆಟ್ಟು ಮಾಡಿ ಕೇಳಿದ. ನಾನು ಕನ್ನಡಿಯೆದುರು ಬಂದು ಮುಖ ನೋಡಿಕೊಂಡೆ. ರಾತ್ರಿ ಮಲಗುವ ಮೊದಲು ಅಕ್ಕನ ಬಿಂದಿ ಸ್ಟಿಕ್ಕರ್‍ಗಳ ಇಡೀ ಪ್ಯಾಕೆಟ್ ಒಡೆದು ಮುಖದ ತುಂಬೆಲ್ಲ ಮೆತ್ತಿಕೊಂಡು ಮಲಗಿದ್ದೆ. ಅಂದಿನ ಆತನ ಆ ನಗು ಇಂದಿಗೂ ನೆನಪಿದೆ. ಆ ನಗುವಿನಿಂದಲೆ ಆತ ನಮ್ಮವನಾಗಿಬಿಟ್ಟಿದ್ದ.
ನನಗೆ ಹೆಸರೇ ಗೊತ್ತಿಲ್ಲದ ಮಾಹಾರಾಷ್ಟ್ರದ ಒಂದು ಹಳ್ಳಿಯವನು ಆತ. ಅಂದಿನ ಕಾಲದ ಉದ್ದನೆಯ ಅಟ್ಲಾಸ್ ಸೈಕಲ್‌ನಲ್ಲಿ ಆತ ಊರೂರು ಸುತ್ತುತ್ತಿದ್ದ. ಬರೀ ಸುತ್ತುತ್ತಿರಲಿಲ್ಲ. ಹಳ್ಳಿ ಹಳ್ಳಿಯ ಮೂಲೆಗಳಲ್ಲಿ ಮರಾಠಿ ಲಾವಣಿ ಪದ್ಯಗಳನ್ನು ಹಾಡಿ ರಂಜಿಸುತ್ತಿದ್ದ. ಅದು ಆತ ನೆಚ್ಚಿಕೊಂಡ ಕಾಯಕ. ಎಲ್ಲಿ ನಾಲ್ಕು ಜನ ಸೇರುತ್ತಾರೆಂದರೆ ಅಲ್ಲಿ ಆತ ಹಾಡಲು ಶುರುಮಾಡುತ್ತಿದ್ದ. ಕರ್ನಾಟಕದ ಮೂಲೆ ಮೂಲೆಯ ಶಾಲೆಗಳಲ್ಲಿ, ಸಂಘ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಆತ ಹಾಡಿದ ಲಾವಣಿಗಳು ಅದೆಷ್ಟೊ. ಹಾಡುವುದು ಅನಿವಾರ್ಯ ಕರ್ಮನನಗೆ ಎಂದು ಹಾಡುತ್ತಿರಲಿಲ್ಲ ಆತ. ತೀವೃವಾಗಿ ಅನಿಭವಿಸಿ ಹಾಡುತ್ತಿದ್ದ. ಎದೆಯಾಳದಿಂದ ಹಾಡುತ್ತಿದ್ದ. ತೃಪ್ತಿಗಾಗಿ ಹಾಡುತ್ತಿದ್ದ. ಸುಖಕ್ಕಾಗಿ ಹಾಡುತ್ತಿದ್ದ ಮತ್ತು ಹಾಡುತ್ತಲೇ ಇರುತ್ತಿದ್ದ.
ಅದೇಕೊ ಆ ನಗುವಿನ ನಂತರ ಆತನ ಮತ್ತು ನಮ್ಮ ಸಂಬಂಧ ಬೆಳೆಯುತ್ತಾ ಹೋಯಿತು. ಆತ ನಮ್ಮ ಸ್ನೇಹಿತನಾದ, ಬಂಧುವಂತಾಗಿಬಿಟ್ಟ. ವರ್ಷಕ್ಕೆ ಮೂರ್ನಾಲ್ಕು ಬಾರಿ ಈ ದಾರಿಯಲ್ಲಿ ಸಾಗುತ್ತಿದ್ದ. ಇತ್ತ ಕಡೆ ಬಂದಾಗಲೆಲ್ಲ ನಮ್ಮ ಮನೆಗೆ ಬರುತ್ತಿದ್ದ. ಬಂದರೆ ಆತ ನಮ್ಮೊಡನೆ ಇರುತ್ತಿದ್ದುದು ಕೆಲ ಗಂಟೆಗಳ ಕಾಲ ಮಾತ್ರ. ಆದರೂ ಆ ಕ್ಷಣಗಳು ಎಷ್ಟೊಂದು ಸುಂದರವಾಗಿದ್ದವು. ರೋಮಾಂಚಕವಾಗಿದ್ದವು. ದಾರಿಯ ಮಧ್ಯದಲ್ಲಿ ಎಲ್ಲೋ ಒಂದೆಡೆ ಕುಳಿತು ತನಗಾಗಿ ತಾನೇ ಚಪಾತಿ ತಯಾರಿಸಿಕೊಳ್ಳುತಿದ್ದ. ನಮ್ಮ ಮನೆಯಲ್ಲಿ ಬಂದರೆ ಆತ ತೆಗೆದುಕೊಳ್ಳುತ್ತಿದ್ದುದು ಸ್ವಲ್ಪ ಪಲ್ಯವೊ ಸಾಂಬಾರೋ ಮಾತ್ರ.
ಕನ್ನಡ ಆತನಿಗೆ ಬರುತ್ತಿರಲಿಲ್ಲ. ಮರಾಠಿಯಲ್ಲಿ ನಮ್ಮ ಜೊತೆ ಮಾತನಾಡುತ್ತಿದ್ದ. ಮನೆ ಮಾತು ಕೊಂಕಣಿಯಾದ ಕಾರಣ ಆತನ ಭಾಷೆ ಅಲ್ಪಸ್ವಲ್ಪ ಅರ್ಥವಾಗುತ್ತಿತ್ತು. ಆದರೆ ಆತನ ಜೊತೆ ನಾವು ಪ್ರೀತಿಯಿಂದಿದ್ದದ್ದು, ಸಲುಗೆ ಪಡೆದದ್ದು, ಮತ್ತೆ ಆತ ನಮ್ಮನ್ನು ಆವರಿಸಿದ್ದು ಆತನ ಹೃದಯದ ಭಾಷೆಯಿಂದ. ಪ್ರೀತಿಯಿಂದ ನನ್ನನ್ನು "ಭಾಚ್ಚಾ" ಎಂದೂ ನನ್ನಕ್ಕನನ್ನು "ಭಾಚ್ಚಿ" ಎಂದೂ ಕರೆಯುತ್ತಿದ್ದ. ನಮ್ಮ ಅಮ್ಮನ ಬಗ್ಗೆ ಅಪಾರ ಗೌರವ ಹೊಂದಿದ್ದ. ಅಪ್ಪನಿಗೆ ಪ್ರತಿ ಬಾರಿಯೂ ಸಾಂಬಾರಿನ ಹಣ ತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತಿದ್ದ. ಆತನ ಸೈಕಲ್‌ಗೆ ಗಾಳಿ ಹಾಕುವುದು ಆಗ ನನಗೆ ಬಲು ಇಷ್ಟದ ಕೆಲಸ.
ಒಮ್ಮೆ ನಮ್ಮ ಶಾಲೆಗೂ ಆತ ಹಾಡಲು ಬಂದಿದ್ದ. ಮಕ್ಕಳಿಂದ ನಾಲ್ಕಾಣೆ, ಎಂಟಾಣೆ ವಸೂಲಿ ಮಾಡಿ ಆಗಾಗ ಮೇಷ್ಟ್ರುಗಳು ನಮ್ಮ ಶಾಲೆಯಲ್ಲಿ ಕಾರ್ಯಕ್ರಮ ಮಾಡುತ್ತಿದ್ದರು. ಈ ಬಾರಿ ಈ ನನ್ನ ಹಾಡುಗಾರ ಮಾಮ ನನ್ನ ಶಾಲೆಗೇ ಬಂದಿದ್ದ. ನನಗಂತೂ ಖುಷಿಯೋ ಖುಷಿ.ನಮ್ಮ ಮನೆಯವರೆ ಯಾರೊ ಹಾಡುತ್ತಿದ್ದಾರೆ ಎಂಬಷ್ಟು ಖುಷಿ. ಈಗ ಶಾಲೆಯಲ್ಲಿ ಹಾಡು ಹಾಡಲು ಬಂದವರು ನನಗೆ ಬಹಳ ಆತ್ಮೀಯರು ಎಂಬ ಹಮ್ಮನ್ನು ನಾನು ನನ್ನ ಗೆಳೆಯರೊಡನೆ ಪ್ರದರ್ಶಿಸಿಯೂ ಇದ್ದೆ. ಆತ ಒಂದುವರೆ ಗಂಟೆಗಳ ಕಾಲ ಹಾಡಿದ. ನನಗಾಗಲಿ, ನನ್ನ ಮೇಷ್ಟುಗಳಿಗಾಗಲಿ ಅಥವಾ ನನ್ನಂತೆ ಕೈ ಬಾಯಿ ಕಟ್ಟಿಕೊಂಡು ಪಿಳಿ ಪಿಳಿ ನೋಡುತ್ತಾ ಕುಳಿತುಕೊಂಡಿದ್ದ ನನ್ನಂತಹ ಮಕ್ಕಳಿಗಾಗಲಿ ಆ ಹಾಡುಗಳು ಅರ್ಥವಾಗುತ್ತಿರಲಿಲ್ಲ. ಇತರರು ಏನಂದುಕೊಂಡರೊ ಗೊತ್ತಿಲ್ಲ. ನಾನಂತೂ "ಎಷ್ಟು ಚೆನ್ನಾಗಿ ಹಾಡಿದ್ದಾನಲ್ಲ" ಎಂದು ಎಲ್ಲರ ಬಳಿಯೂ ಹೇಳಿ ಉಬ್ಬಿ ಹೋಗಿದ್ದೆ.
ಆತ ಹಾಡು ಹೇಳುವ ವೃತ್ತಿಯನ್ನು ಯಾಕೆ ನೆಚ್ಚಿಕೊಂಡ? ಅದೂ ಸಹ ಹೀಗೆ ಊರೂರು ಸುತ್ತಿ ಹಾಡಿ ರಂಜಿಸುವ ಕಾಯಕ ಆತ ಏಕೆ ಮಾಡುತ್ತಿದ್ದ ಎಂದು ನನಗೆ ಅರ್ಥವಾಗುತ್ತಿರಲಿಲ್ಲ. ಆತ ಅಂದು ಹಾಡಿದ ಹಾಡುಗಳು ನನಗೆ ನೆನಪಿಲ್ಲ. ಆದರೆ ಆತನ ಮುಖದಲ್ಲಿ ಮೂಡುತ್ತಿದ್ದ ಎಕ್ಸ್‌ಪ್ರೆಶನ್‌ಗಳು ಇಂದಿಗೂ ನನಗೆ ಮರೆಯಲಾಗದ್ದು. ೪೦ ದಾಟಿದವನಂತೆ ಕಾಣುತ್ತಿದ್ದ. ಆತನಿಗೆ ಮದುವೆಯಾಗಿರಲಿಲ್ಲ ಎಂದು ನನಗಾಗ ತಿಳಿದಿತ್ತು.
ಆತನ ವಿಳಾಸ ಬರೆದುಕೊಳ್ಳಬೇಕೆಂಬ ಬುದ್ದಿ ಇರುವ ವಯಸ್ಸು ಅದಾಗಿರಲಿಲ್ಲ. ಆತ ಯಾವಾಗ ಊರಿಗೆ ಹೋಗುತ್ತಾನೆ ಅಥವಾ ಯಾವತ್ತು ಅಲ್ಲಿಂದ ಹೊರಡುತ್ತಾನೆ ಎಂಬ ಪ್ರಶ್ನೆಗಳನ್ನು ನಾನು ಕೇಳಿರಲಿಲ್ಲ. ಎಷ್ಟೊಂದು ದಡ್ಡನಿದ್ದೆ ಆಗ ಅಂತ ನಂತರ ಹಲವು ಬಾರಿ ಅನಿಸಿದ್ದಿದೆ.
ಒಂದು ನಗು ಒಂದೆರಡು ಮಾತು, ಅಕ್ಕರೆ , ಹೃದಯವಂತಿಕೆ ಇಂತಹ ಎಷ್ಟೊ ಸಂಬಂಧಗಳಿಗೆ ನಾಂದಿಯಾಗಬಹುದು. ಎಷ್ಟೊಂದು ಸ್ನೇಹ, ಪ್ರೀತಿ ನಮ್ಮ ದಾರಿಯಲ್ಲಿ ಎದುರಾಗಬಹುದು. ಸ್ವತಃ ತೆರೆದುಕೊಳ್ಳುವವರಿಗೆ ಹಲವಾರು ಬಾಗಿಲುಗಳು ತೆರೆಯುತ್ತವೆ. ೧೫-೨೦ ವರ್ಷಗಳ ಹಿಂದೆ ಇದ್ದಂತೆ ಈಗ ಇಲ್ಲ. ಇಂದು ಪ್ರಜ್ಞಾಪೂರ್ವಕವಾಗಿ ಎಲ್ಲವನ್ನೂ ಅನುಮಾನದಿಂದಲೇ ನೋಡುತ್ತೇವೆ ನಾವು. ಆಗ ಪೇಟೆ ಪಟ್ಟಣಗಳಲ್ಲಿ ಮಾತ್ರ ಹಗಲು ಹೊತ್ತಿನಲ್ಲೂ ಮನೆಗಳ ಬಾಗಿಲು ಮುಚ್ಚಿಕೊಂಡಿರುತ್ತಿತ್ತು. ಈಗ ಹಳ್ಳಿಗಳಲ್ಲೂ ಇದೇ ರೋಗ ಬಂದು ಬಿಟ್ಟಿದೆ. ಮನೆ ಮಂದಿ ಹೊರಗೆ ಹೋಗುವಾಗ ಮತ್ತು ಒಳಗೆ ಬರುವಾಗ ಮಾತ್ರ ತೆರೆಯುವ ಕದಗಳು ಇನ್ನುಳಿದಂತೆ ಸದಾ ಮುಚ್ಚಿಯೇ ಇರುವಂಥವು. ಯಾರಾದರೂ ಬಂದರೆ ಮೊದಲು ಬಾಗಿಲ ನಡುವಿನ ಚಿಕ್ಕ ರಂಧ್ರದಲ್ಲಿ ಇಣುಕಿ ಮತ್ತೆ ಬಾಗಿಲು ತೆಗೆಯುವ ಅಥವಾ ತೆರೆಯದೆ ಇರುವ ಸ್ವಾತಂತ್ರ್ಯವನ್ನು ಕಾಯ್ದುಕೊಂಡಿರುತ್ತಾರೆ. ಈಗಿಗ ನಮ್ಮ ಜನರ ಮನಸ್ಸುಗಳು ಕೂಡ ಮುಚ್ಚಿದ ಬಾಗಿಲುಗಳ ಮನೆಗಳ ರೀತಿಯೇ ಆಗಿವೆ.
If you judge people you will have no time to love them.ನೀವು ಕೇವಲ ವಿಮರ್ಶೆ ಮಾಡುತ್ತಾ ಕುಳಿತಿರುತ್ತೀರಿ ಅಷ್ಟೆ.
ಅಂದು ಕೊನೆಯದಾಗಿ ಆತ ಬಂದಿದ್ದ. ಅದೇ ಕೊನೆ ಅಂತ ನನಗೆ ಆಗ ಅನಿಸಿರಲಿಲ್ಲ. ಆಥವಾ ಈಗಲೂ ಅನಿಸುತ್ತಿಲ್ಲ. ಅಂದು ನನ್ನ ಜೊತೆ ತುಂಬಾ ಹೊತ್ತು ಕಳೆದಿದ್ದ. ಸಂಜೆ ಸುಮಾರು ನಾಲ್ಕು ಗಂಟೆಯ ಹೊತ್ತಿಗೆ ಸೈಕಲ್ ಏರಿ ಟಾಟಾ ಹೇಳುವ ಮೊದಲು ಮುಂದಿನ ಬಾರಿ ಬರುವಾಗ ನಿನಗಾಗಿ ಮಾಮಿಯನ್ನು ತರುತ್ತೇನೆ ಎಂದು ಹೇಳಿದ್ದ. ಮದುವೆ ಮಾಡಿಕೊಳ್ಳುತ್ತಿದ್ದೇನೆ ಎಂದು ಅಮ್ಮನಲ್ಲಿ ಹೇಳಿದ್ದ. ಅಂದು ನನ್ನಿಂದ ದೂರವಾದ ಹಾಡುಗಾರ ಮತ್ತೆ ಮರಳಿ ಬರಲಿಲ್ಲ. ಆತ ಎಲ್ಲಿ ಹೋದ? ನನ್ನ ಪ್ರೀತಿಯ ಹಾಡುಗಾರ ಎಲ್ಲಿದ್ದಾನೆ ಈಗ? ಹಳ್ಳಿಹಳ್ಳಿಗೂ ಲಾವಣಿ ಹಾಡಲು ಇನ್ನೂ ಹೋಗುತ್ತಿದ್ದಾನೆಯೆ?ದಣಿದಿರುವನೆ? ಮುದುಕನಾಗಿರುವನೆ? ಮದುವೆ ಮಾಡಿಕೊಂಡು ಮಾಮಿಯೊಂದಿಗೆ ಸುಖವಾಗಿರುವನೆ? ನಿಮಗೆ ಗೊತ್ತಾ ನನ್ನ ಹಾಡುಗಾರ ಎಲ್ಲಿ ಹೋದ?
ಅದೇಕೊ ಇಂದು ನನ ಹಾಡುಗಾರ ತುಂಬಾ ನೆನಪಾದ. ಏನೋ ಬರೆಯಬೇಕೆಂದಿದ್ದವನು ಥಟ್ಟನೆ ಹಾಡುಗಾರನ ನೆನಪಾಗಿ ಬರೆಯಲು ಕುಳಿತೆ. ನನ್ನ ಹಾಡುಗಾರ ಮತ್ತೆ ಬರಬಹುದು, ಮತ್ತೆ ಲಾವಣಿ ಹಾಡಬಹುದು. ಎಂದಾದರೊಂದು ದಿನ ಪುನಃ ಬಂದು ಭಾಚ್ಚಾ ಎಂದು ನನ್ನನು ಕರೆಯಬಹುದು ಅದೇ ಹಳೆಯ ಅಕ್ಕರೆಯಿಂದ. ಕಳೆದು ಹೋದ ದಿನಗಳ ನೆನಪುಗಳ ಜಾಡು ಹಿಡಿದು ಮತ್ತೆ ಬಾರನೇ ನನ್ನ ಹಾಡುಗಾರ?

ನಿಮ್ಮವನು
ಶಶಿಧರ ಹೆಮ್ಮಾಡಿ

2 comments:

manjunathbillava said...

hey really great article
nanna mana kalakuvanthittu,
nimma barahadalli hadugara
varthamanadalli eddanthittu.
athana eruvikege mana bayasuvanthittu

Phaedrus said...

hey shashidhar nice one!

Hemanth