Sunday, January 12, 2014

ಬೆನ್ನಿ ಹಿನ್‌ ಬಾಬಾನನ್ನು ವಿರೋಧಿಸೋಣ- ಬೆನ್‌ ಹಿಂದೆನೂ ಒಮ್ಮೆ ನೋಡಿಕೊಳ್ಳೋಣ




 ಬೆನ್ನಿ ಹಿನ್ಬಾಬಾನನ್ನು ವಿರೋಧಿಸೋಣ

ಬೆನ್ಹಿಂದೆನೂ ಒಮ್ಮೆ ನೋಡಿಕೊಳ್ಳೋಣ



ಬೇವಕೂಫೋಂ ಕಿ ಕಮಿ ನಹಿ
ಏಕ್ಢೂಂಡೊ ಹರಝಾರ್ಮಿಲ್ತೆಂ ಹೈಂ
(ಮೂರ್ಖರಿಗೇನೂ ಕೊರತೆ ಇಲ್ಲ, ಒಬ್ಬರನ್ನು ಹುಡುಕಿದರೆ ಸಾವಿರ ಮಂದಿ ಸಿಗುತ್ತಾರೆ)

ದಿನ ಬೆಳಗಾದರೆ ಧರ್ಮದ ಹೆಸರಿನಲ್ಲಿ, ಧರ್ಮ ಗ್ರಂಥಗಳ ಹೆಸರಿನಲ್ಲಿ, ಜ್ಯೋತಿಷ್ಯ-ವಾಸ್ತು ಎಂದೆಲ್ಲ ನಮ್ಮನ್ನು ಮೂರ್ಖರನ್ನಾಗಿಸಲು ಟಿವಿ ಚಾನೆಲ್ಗಳು ಕಾದು ಕೂತಿರುತ್ತವೆ. ದೇವರನ್ನು ಆರಾಧಿಸಲಿಕ್ಕೇಂದೇ ಪ್ರತ್ಯೇಕ ಚಾನೆಲ್ಗಳಿವೆ. ಕುರಾನ್‌, ಬೈಬಲ್‌, ಗೀತೆಗಳನ್ನು ಬೋಧನೆ ಮಾಡುವ ಚಾನೆಲ್ಗಳು, ರೇಡಿಯೋ ಸ್ಟೇಷನ್ಗಳೂ ಇವೆ. ಇಂಟರ್ನೆಟ್ನಲ್ಲಿಯೇ ತಿರುಪತಿ ತಿಮ್ಮಪ್ಪನಿಗೂ, ಶಿರಡಿ ಸಾಯಿಬಾಬಾನಿಗೂ ಆರತಿ ಬೆಳಗಲು, ಪೂಜೆ ಮಾಡಲು, ಕಾಣಿಕೆ ಹಾಕಲು ವ್ಯವಸ್ಥೆ ಇದೆ. ಬಗೆಬಗೆಯ ಪೋಷಾಕು ಧರಿಸಿದ, ವಿವಿಧ ಆಕೃತಿಯ ನಾಮಗಳನ್ನು ಧರಿಸಿದ "ಸ್ವಾಮಿಗಳ' ಬಾಯಿಂದ ಬಂದ ಮಾತನ್ನೇ ಪ್ರವಚನ ಎಂದು ತನ್ಮಯರಾಗಿ ಕೇಳುವ ಜನರು, ಕುರಾನ್ ಒಂದೊಂದು ವಾಕ್ಯವನ್ನೂ ಅದು ಯಾವ ಪುಟದಲ್ಲಿದೆ ಎಂದು ಕರಾರುವಕ್ಕಾಗಿ ಹೇಳುತ್ತಾ ಎಲ್ಲದಕ್ಕೂ ಇಲ್ಲಿದೆ ಪರಿಹಾರ ಎಂದು ಮಂಕುಬೂದಿ ಎರಚುವ ರಝಾಕೀರ್ನಾಯ್ಕ್ಗಳು, "ಗಾಡ್ಸೆಡ್‌, ಯು ವಿಲ್ಗೋ ಟು ಹೆಲ್‌' ಎಂದು ಗಂಡಸೊಬ್ಬ ಹೇಳಿದರೆ ಹೆಂಗಸೊಬ್ಬಳು "ದೇವರು ಹೇಳಿದ, ನೀನು ನರಕಕ್ಕೆ ಹೋಗುವಿ' ಎಂದು ಅಷ್ಟೇ ವೇಗದಲ್ಲಿ ಭಾಷಾಂತರ ಮಾಡಿ ಭಯ ಹುಟ್ಟಿಸುವ ಜೋಡಿಗಳು ಟಿವಿ ಪರದೆಗಳಲ್ಲಿ ಅದೆಷ್ಟು ವ್ಯಸ್ತರಾಗಿದ್ದಾರೆ.

ಮೌಢ್ಯವನ್ನು ಮಟ್ಟ ಹಾಕಲು ಕಾನೂನು ತರುತ್ತೇವೆ ಎಂದು ಸರಕಾರ ಹೊರಟರೆ ಮೌಢ್ಯ ವಿರೋಧಿ ಕಾನೂನನ್ನೇ ವಿರೋಧಿಸಿ ಚಾನೆಲ್ಗಳಲ್ಲಿ ಚರ್ಚೆಗಳು ನಡೆಯುತ್ತವೆ. ವಿಜ್ಞಾನಿಗಳನ್ನೋ, ವಿಚಾರವಾದಿಗಳನ್ನೋ ಚರ್ಚೆಗಳಿಗೆ ಕರೆಯದೆ ಜ್ಯೋತಿಷಿಗಳನ್ನು, ಸ್ವಾಮೀಜಿಗಳನ್ನು ಕರೆದು ಮೌಢ್ಯವೇ ವಿಜ್ಞಾನ ಎಂದು ನಂಬಿಸುವ ಕೆಲಸಗಳು ನಡೆಯುತ್ತಿವೆ. ಜ್ಯೋತಿಷ್ಯವೇ ಒಂದು ದೊಡ್ಡ ಢೋಂಗಿ. ಆದರೂ ನಮ್ಮ ಚಾನೆಲ್ಗಳು ಢೋಂಗಿ ಜ್ಯೋತಿಷಿಗಳು, ಢೋಂಗಿ ಬಾಬಾಗಳು ಎಂದು ಪ್ರತ್ಯೇಕ ಕ್ಯಾಟಗರಿಯೊಂದನ್ನು ಹುಟ್ಟುಹಾಕಿ ಅವರ ವಿರುದ್ಧ ಕಾರ್ಯಾಚರಚರಣೆ ಕೈಗೊಂಡಂತೆ ನಾಟಕ ಮಾಡಿ ತಮ್ಮ ಚಾನೆಲ್ಗಳಲ್ಲಿ ಬರುವ ಜ್ಯೋತಿಷಿಗಳು, ಬಾಬಾಗಳೇ ಅಸಲಿ ಎಂದು ಅವರ ಮಾರ್ಕೆಟ್ಹೆಚ್ಚಿಸುವ ಕೆಲಸ ಮಾಡುತ್ತಿವೆ. ರವಿಶಂಕರ ಗುರೂಜಿ, ನಿತ್ಯಾನಂದ, ಪೇಜಾವರ ಸ್ವಾಮಿ, ಬಾಬಾ ರಾಮ್ದೇವ್‌, ಆಸಾರಾಂ ಬಾಪೂ, ನಿರ್ಮಲ್ಬಾಬಾ, ಕಾಳಿ ಸ್ವಾಮಿ, ಬ್ರಹ್ಮಾಂಡ ಗುರೂಜಿ ಮುಂತಾದವರೆಲ್ಲ ನಿತ್ಯವೂ ನಮ್ಮ ಜನರನ್ನು ತಮ್ಮ ಮಾತು-ಕೃತಿಗಳ ಮೂಲಕ ಮೂರ್ಖರನ್ನಾಗಿಸುತ್ತಿದ್ದಾರೆ. ಇಷ್ಟೆಲ್ಲ ಇರುವ ದೇಶದಲ್ಲಿ ಇವರದೇ ಸಂತತಿಗೆ ಸೇರಿರುವ ಅವನ್ಯಾವನೋ ಒಬ್ಬ ಬೆನ್ನಿ ಹಿನ್ಬೆಂಗಳೂರಿಗೆ ಬರುತ್ತಾನೆಂದರೆ ಚೆಡ್ಡಿಗಳು ತಮ್ಮ ಚೆಡ್ಡಿ ಹರಿದು ಹೋದಂತೆ ಆಡುತ್ತಿದ್ದಾರೆ. ಮೇಲೆ ಹೇಳಿದ ಸ್ವಾಮಿಗಳು, ಬಾಬಾಗಳು, ಜ್ಯೋತಿಷಿಗಳು ಎಲ್ಲರೂ ಅದೇನೋ ಸುನಾಮಿ ಬರುತ್ತಿದೆ ಎಂಬಂತೆ ಭಯಹುಟ್ಟಿಸುತ್ತಿವೆ. ಅಷ್ಟಕ್ಕೂ ಈತನಿಗೂ ಮತ್ತು ನಮ್ಮ ದೇಶದ ರವಿಶಂಕರ್-ರಾಮ್ದೇವ್-ಝಾಕೀರ್ನಾಯ್ಕ್ಮುಂತಾದವರಿಗೂ ಇರುವ ವ್ಯತ್ಯಾಸಗಳೆಂದರೆ ಬೆನ್ನಿ ಹಿನ್ಇವರೆಲ್ಲರಿಗಿಂತ ಹೆಚ್ಚು ಶ್ರೀಮಂತ ಮತ್ತು ಇವರೆಲ್ಲರಿಗಿಂತ ಹೆಚ್ಚು ವೈಭವದಿಂದ ಜೀವನ ಸಾಗಿಸುತ್ತಿದ್ದಾನೆ ಮತ್ತು ಆತನ ಮೋಡಸ್ಒಪೆರಾಂಡಿ ಬೇರೆ ಎನ್ನುವುದು ಮಾತ್ರ.

ಬೆನ್ನಿ ಹಿನ್ಹೋದಲ್ಲೆಲ್ಲ ಆತನ ಒಂದು ಸ್ಪರ್ಶಕ್ಕೆ-ಹೀಲಿಂಗ್ಟಚ್-ಲಕ್ಷಾಂತರ ಜನ ಕಾಯುತ್ತಾರೆ. ಈತ ಮುಟ್ಟಿದರೆ ನಿಮ್ಮ ಕಾಲು ನೋವು, ಸಂಧಿವಾತ, ಹೊಟ್ಟೆ ನೋವು, ಮಧುಮೇಹ, ಕ್ಯಾನ್ಸರ್ಎಲ್ಲವೂ ಗುಣವಾಗುತ್ತದಂತೆ. ಈತ ಮುಟ್ಟಿದ ಎಂದರೆ ನಡೆಯಲಿಕ್ಕಾಗದವರು ನಡೆದಾಡುತ್ತಾರೆ, ಕಿವುಡರ ಕಿವಿ ಕೇಳಿಸುವಂತಾಗುತ್ತದೆ, ಕುರುಡನಿಗೆ ಕಣ್ಣು ಬರುತ್ತದೆ, ಲಕ್ವ ಬಡಿದವನ ಅಂಗಾಂಗಗಳು ಮತ್ತೆ ಚಟುವಟಿಕೆಯಿಂದ ಪುಟಿದೇಳುತ್ತವೆ ಎಂದೆಲ್ಲ ಹೇಳಲಾಗುತ್ತದೆ. ಹಾಗಂತ ಪ್ರಚಾರ ಮಾಡಿಕೊಳ್ಳಲು ಆತನದೇ ಟಿವಿ ಚಾನೆಲ್ಗಳಿವೆ, ಶೋಗಳಿವೆ, ಪುಸ್ತಕಗಳಿವೆ ಮತ್ತು ಇನ್ನೂ ನಾನಾ ವಿಧಾನಗಳಿವೆ. ಇದಕ್ಕೆಲ್ಲ ಮರುಳಾದ ಲಕ್ಷಾಂತರ ಮಂದಿ ಯೇಸುವೇ ಕಳುಹಿಸಿದ ದೇವದೂತ ನಮ್ಮ ಊರಿಗೆ ಯಾವಾಗ ಬರುತ್ತಾನೆಂದು ಹಾತೊರೆಯುತ್ತಾರೆ. 2005ರಲ್ಲಿ ಬೆಂಗಳೂರಿಗೆ ಬಂದಿದ್ದ ಬೆನ್ನಿ ಹಿನ್ ಸಮಾವೇಶಕ್ಕೆ ದಾಖಲೆ ಸಂಖ್ಯೆಯ ಜನರು ನೆರೆದಿದ್ದರು. ಅದು ಬೆನ್ನಿ ಹಿನ್ ವೆಬ್ಸೈಟ್ನಲ್ಲಿಯೂ ದಾಖಲಾಗಿದೆ. ಈಗ ಆತ ಮತ್ತೆ ಜನವರಿ ತಿಂಗಳಲ್ಲಿ ಬೆಂಗಳೂರಿಗೆ ಬರುತ್ತಿದ್ದಾನೆ.

ಬೆನ್ನಿ ಹಿನ್ಇಸ್ರೇಲ್ನಲ್ಲಿ ಹುಟ್ಟಿದವನು. ಅರಬ್-ಇಸ್ರೇಲ್ಯುದ್ಧದ ತರುವಾಯ ಕೆನಡಾಕ್ಕೆ ವಲಸೆ ಹೋಗಿ ಈಗ ಅಮೇರಿಕದಲ್ಲಿ ನೆಲೆಸಿದ್ದಾನೆ. ಅಮೇರಿಕದ ಬುದ್ಧಿವಂತ ಜನರಿಗೆ ಈತ ಎಂತಹ ಮಂಕುಬೂದಿ ಎರಚಿದ್ದಾನೆಂದರೆ ಈತನ ಧಾರ್ಮಿಕ ಸಭೆಗಳು ನಡೆಯುವುದೇ ಅಲ್ಲಿನ ದೊಡ್ಡ ಸ್ಟೇಡಿಯಂಗಳಲ್ಲಿ. ಈತನ ದೈನಂದಿನ 30 ನಿಮಿಷಗಳ ಟೆಲಿವಿಷನ್ಶೋ "ದಿಸ್ಇಸ್ಯುವರ್ಡೇ' ವಿಶ್ವದಾದ್ಯಂತ ಹಲವು ಚಾನೆಲ್ಗಳಲ್ಲಿ ಪ್ರಸಾರವಾಗುತ್ತಿದೆ ಮತ್ತು ಅತ್ಯಂತ ಹೆಚ್ಚು ವೀಕ್ಷಕರನ್ನು ಶೋ ಹೊಂದಿದೆ. ರೋಗಿಗಳು ಎಂದು ವೇದಿಕೆ ಹತ್ತಿದವರ ಮೈ ಮುಟ್ಟಿದ ಕೂಡಲೇ ಅವರು ಅಲ್ಲಿಯೇ ಕುಸಿದು ನೆಲಕ್ಕೊರಗುವುದು ಮತ್ತು ರೋಗಿಗಳು ರೋಗ ಗುಣಮುಖರಾದಂತೆ ವರ್ತಿಸುವುದನ್ನು ನೀವು ಯಾವತ್ತಾದರೂ ಟಿವಿ ಚಾನೆಲ್ಗಳಲ್ಲಿ ನೋಡಿರುತ್ತೀರಿ. ಈತ ಬರೆದ ಹತ್ತಾರು ಪುಸ್ತಕಗಳು ದಾಖಲೆಸಂಖ್ಯೆಯಲ್ಲಿ ಮಾರಾಟವಾಗಿದೆ. ಈತನ ಸಭೆಗಳಿಗೆ ನೀವು ಹೋಗಬೇಕೆಂದರೆ ದುಬಾರಿ ಶುಲ್ಕವೂ ಇದೆ. ಬೆಂಗಳೂರಿನಲ್ಲಿಯೂ ಈತನ ದರ್ಶನಕ್ಕೆ "ಭಕ್ತಾದಿಗಳು' ಸಾವಿರ ರೂಪಾಯಿ ಕಾಣಿಕೆ ನೀಡಿಯೇ ಹೋಗಬೇಕು.


ನಿಜಕ್ಕೂ ಈತನ ಸ್ಪರ್ಶ ರೋಗಗಳನ್ನು ಗುಣಪಡಿಸುತ್ತದೆಯೆ? ಈತನೇನು ದೈವಾಂಶ ಸಂಭೂತನೆ? ಖಂಡಿತ ಅಲ್ಲ. ಈತ ನಮ್ಮ ಭಾರತೀಯ ಬಾಬಾಗಳಂತೆಯೆ ಒಬ್ಬ ವಂಚಕ. ಯಾರನ್ನೂ ಮರುಳು ಮಾಡಬಲ್ಲ ಮಾತುಗಾರಿಕೆ, ನೋಡಿದರೆ ನಂಬಬೇಕು ಎಂಬಂತಹ ರೂಪ, ಸುಳ್ಳನ್ನೇ ಸತ್ಯ ಮಾಡುವ ಜಾಣ್ಮೆ ಮತ್ತು ಪ್ರಚಾರ ಈತನ ಬಂಡವಾಳ. "ದೇವರು ನನ್ನೊಳಗೆ ಬಂದಿದ್ದಾನೆ, ನನ್ನು ಮೂಲಕ ನಿಮ್ಮನ್ನೆಲ್ಲ ಆತ ತಲುಪುತ್ತಾನೆ, ನಿಮ್ಮ ರೋಗಗಳನ್ನು ವಾಸಿ ಮಾಡಲು ಆತ ನನ್ನೊಳಗೆ ಇದ್ದಾನೆ, ನನ್ನ ಸ್ಪರ್ಶದಿಂದ ನಿಮ್ಮ ದೇಹದೊಳಕ್ಕೆ ಒಂದು ಬೆಚ್ಚನೆಯ ಅನುಭವ ಬಂದು ನಿಮ್ಮ ರೋಗಗಳಿಂದ ನೀವು ಮುಕ್ತರಾಗುವಿರಿ' ಎಂದೆಲ್ಲ ಬೆನ್ನಿ ಹಿನ್ಬೊಗಳೆ ಬಿಡುತ್ತಾನೆ. "ನನ್ನೊಳಗೆ ಯೇಸು ಅಭಿಷಿಕ್ತನಾಗಿದ್ದಾನೆ, ನನ್ನೊಳಗೆ ದೇವರ ಶಕ್ತಿಯಿಂದ ಮಹಾಕಂಪನವಾಗುತ್ತಿದೆ, ನನ್ನ ಅನುಭವಕ್ಕೆ ಯೇಸು ಬರುತ್ತಿದ್ದಾನೆ' ಎಂದೂ ಹೇಳುವ ಈತ ಮಾಡುವುದೆಲ್ಲ ಕಣ್ಣಿಗೆ ಮಣ್ಣೆರಚುವ ಕೆಲಸ. ಈತ ಎಂತಹ ಮೋಸಗಾರನೆಂಬುದನ್ನು ಅಮೇರಿಕದ ಅನೇಕ ಮಾಧ್ಯಮಗಳು ತಮ್ಮ ಕುಟುಕು ಕಾರ್ಯಾಚರಣೆಗಳ ಮೂಲಕ, ಹಿಡನ್ಕ್ಯಾಮೆರಾಗಳ ಮೂಲಕ ಜಗತ್ತಿಗೆ ತೋರಿಸಿಕೊಟ್ಟಿವೆ. ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿ ಡಿವೈನ್ಪಾರ್ಕ್ಎಂಬ ಮಠ ನಿರ್ಮಿಸಿ ಕೋಟಿಗಟ್ಟಲೆ ದುಡ್ಡು ಮಾಡಿರುವ ವ್ಯಕ್ತಿಯೊಬ್ಬ ತನ್ನೊಳಗೆ ವಿವೇಕಾನಂದ ಇದ್ದಾನೆ ಎಂದು ಹೇಳುತ್ತಿರುವುದು ನೆನಪಾಗುತ್ತಿದೆ.

ಬೆನ್ನಿ ಹಿನ್ ಸಭೆಗಳಲ್ಲಿ ಆತನ ಬಾಡಿಗಾರ್ಡ್ಗಳ ದೊಡ್ಡ ಪಡೆಯೇ ಇರುತ್ತದೆ. ಮುಂದಿನ ಸಾಲುಗಳನ್ನು ದೊಡ್ಡ ದಾನಿಗಳು, ಗಣ್ಯರಿಗೆ ಮೀಸಲಾಗಿಡಲಾಗಿರುತ್ತದೆ. ಈತನ ಸ್ಪರ್ಶದ ಮಾಯೆಯ ಪ್ರಚಾರ ಕೇಳಿ ಬಂದ ರೋಗಿಗಳು, ಅಶಕ್ತರು, ಗಾಲಿ ಕುರ್ಚಿಗಳಲ್ಲಿ ಬಂದವರು ಹಿಂದಿನ ಸಾಲುಗಳಲ್ಲಿ ಇರುತ್ತಾರೆ. ದೊಡ್ಡ ಆರ್ಕೆಸ್ಟ್ರಾದ ಸಂಗೀತ, ಭ್ರಮಾಲೋಕ ಸೃಷ್ಟಿಸುವ ಬೆಳಕು, ಎಲ್ಲರೂ ದಿಗ್ಭ್ರಾಂತರಾಗಬೇಕೆಂದೇ ನಿರ್ಮಿಸಿದ ಕೃತಕವಾದ ವಾತಾವರಣ ಈತನ ಎಲ್ಲ ಸಭೆಗಳಲ್ಲೂ ಇರುತ್ತದೆ. ಈತನ ಸ್ಪರ್ಶಕ್ಕಾಗಿ ಮುಂದೆ ಬರುವವರಲ್ಲಿ ಹೆಚ್ಚಿನವರು ಮಾಡುವುದು ನಾಟಕ ಮಾತ್ರ. ಅದರಲ್ಲಿ ಕೆಲವರು ಈತನ ಬಾಡಿಗಾರ್ಡ್ಗಳೇ ಬೇರೆ ವೇಷದಲ್ಲಿ ಬಂದಿರುವರು. ಈತ ಮುಟ್ಟಿದ ಕೂಡಲೇ ಅಡ್ಡ ಬೀಳುವುದು-ಏಳುವುದು ಎಲ್ಲವೂ ನಾಟಕ ಮಾತ್ರ. ಕೆಲವರನ್ನು ಈತ ಸಮ್ಮೋಹಿನಿಗೆ ಒಳಗಾಗಿಸುವುದೂ ಇದೆ. ಈತ ಮುಟ್ಟುವ ಹೆಚ್ಚಿನ ರೋಗಿಗಳ ಕಾಯಿಲೆ ಕಣ್ಣಿಗೆ ಕಾಣದಕಾಯಿಲೆಗಳು. ಅರ್ಥಾತ್ಕ್ಯಾನ್ಸರ್ಮುಂತಾದ ದೇಹದ ಒಳಗಿನ ರೋಗಗಳು. ಈತ ಮುಟ್ಟಿದ ಕೂಡಲೇ ನಿಮ್ಮ ರೋಗ ವಾಸಿಯಾಗಿದೆ ಅಥವಾ ಕ್ಷಣ ವಾಸಿಯಾಗಿಲ್ಲ ಎಂದರೆ ದೇವರು ಬಯಸಿದ ಕೂಡಲೇ ವಾಸಿಯಾಗುತ್ತದೆ ಎಂದು ಹೇಳುತ್ತಾನೆ. ಈತ ಮುಟ್ಟಿದ ಕೂಡಲೇ ಗಾಲಿ ಕುರ್ಚಿಯಲ್ಲಿರುವ ವ್ಯಕ್ತಿ ಎದ್ದು ನಿಂತಂತೆ ತೋರಿಸಲಾಗುತ್ತದೆ. ಕಿವುಡನಿಗೆ ಕಿವಿ ಕೇಳಿಸಿದಂತೆ ತೋರಿಸಲಾಗುತ್ತದೆ. ಆದರೆ ಇದೆಲ್ಲವೂ ಈತನ ವಂಚನೆಯ ಭಾಗವೇ ಆಗಿರುತ್ತದೆ. ಈತನ ಸಭೆಗಳಿಗೆ ಬರುವ ನಿಜವಾಗಿಯೂ ಕೈ ಕಾಲುಗಳಲ್ಲಿ ಬಲಹೀನತೆ ಇರುವ ಜನಗಳು, ಲಕ್ವ ಬಡಿದ ರೋಗಿಗಳು, ದೇಹದಲ್ಲಿ ಚಲನೆ ಕಳೆದುಕೊಂಡ ರೋಗಿಗಳು ವೇದಿಕೆ ಹತ್ತಲಿಕ್ಕೂ ಈತನ ಸಭೆಗಳಲ್ಲಿ ಅವಕಾಶವಿಲ್ಲ. ಅಮೇರಿಕದ ಮಾಧ್ಯಮಗಳು ನಡೆಸಿದ ಕಾರ್ಯಾಚರಣೆಗಳಲ್ಲಿ ಇದು ಸ್ಪಷ್ಟವಾಗಿ ಕ್ಯಾಮೆರಾಗಳಲ್ಲಿ ದಾಖಲಾಗಿದೆ. ಯಾರಿಗೆ ಎದ್ದು ನಿಲ್ಲಲು ಸಾಧ್ಯವಿಲ್ಲಮೋ ಅವರನ್ನು ಈತನ ಬಾಡಿಗಾರ್ಡ್ಗಳು ಬೇರೆ ದಿಕ್ಕಿಗೆ ಕಳುಹಿಸುತ್ತಾರೆ. ಒಂದೊಮ್ಮೆ ಅಂತಹ ವ್ಯಕ್ತಿಗಳು ಅಥವಾ ಅವರ ಸಂಬಂಧಿಗಳು ಬೆನ್ನಿ ಹಿನ್ತಮ್ಮನ್ನು ಮುಟ್ಟಲೇಬೇಕೆಂದು ಹಠ ಮಾಡಿದರೆ, ವೇದಿಕೆ ಏರುವ ಪ್ರಯತ್ನ ಮಾಡಿದರೆ ಅಂತಹ ವ್ಯಕ್ತಿಗಳಿಗೆ ಹಿಂದಕ್ಕೆ ಕರೆದುಕೊಂಡು ಹೋಗಿ ಎಚ್ಚರಿಕೆ ನೀಡಲಾಗುತ್ತದೆ ಅಥವಾ ಅವರ ಮೇಲೆ ಹಲ್ಲೆ ನಡೆಸಿ ಬಾಯಿ ಮುಚ್ಚಿಸಲಾಗುತ್ತದೆ. ಇಂತಹ ಹಲ್ಲೆಗಳನ್ನು ನಡೆಸಿದ ಆರೋಪಗಳು ಸ್ವತಃ ಬೆನ್ನಿ ಹಿನ್ಮಗನ ಮೇಲೂ ಇದೆ. ಎಲ್ಲ ನಾಟಕವನ್ನೂ ಮೊದಲೇ ವ್ಯವಸ್ಥಿತವಾಗಿ ಯೋಜಿಸಿರಲಾಗುತ್ತದೆ.

ನರೇಂದ್ರ ಮೋದಿ ಭಾರತದ ಇತಿಹಾಸದ ಬಗ್ಗೆ ಸುಳ್ಳು ಹೇಳುವುದರಲ್ಲಿ ನಿಸ್ಸೀಮನಾದರೆ ಬೆನ್ನಿ ಹಿನ್ಬೈಬಲ್ಬಗ್ಗೆ ಪದೇಪದೇ ಸುಳ್ಳು ಹೇಳುತ್ತಾನೆ. ಬೈಬಲ್ನಲ್ಲಿ ಹೇಳಿದ್ದೋಂದು. ಈತ ಹೇಳುವುದೇ ಇನ್ಣೆೊಂದು. ಈತ ಭವಿಷ್ಯ ಕೂಡ ಹೇಳುತ್ತಾನೆ. ಎಂತಹ ಭವಿಷ್ಯಗಳೆಂದರೆ ಕೆಲ ಸ್ಯಾಂಪಲ್ಗಳು ಇಲ್ಲಿವೆ. 1995ರಲ್ಲಿ ಅಮೇರಿಕದಲ್ಲಿ ಸಲಿಂಗರತಿ ನಿರ್ನಾಮವಾಗುತ್ತದೆ ಎಂದು ಹೇಳಿದ. 2000ನೇ ಇಸವಿಯಲ್ಲಿ ಅಮೇರಿಕದ ಪೂರ್ವ ಕರಾವಳಿ ಭೂಕಂಪದಲ್ಲಿ ಸಂಪೂರ್ಣ ನಾಶವಾಗಿ ಹೋಗುತ್ತದೆ ಎಂದು ಹೆದರಿಸಿದ. ಕ್ಯೂಬಾದ ಫಿಡೆಲ್ಕಾಸ್ಟ್ರೋ 1990ರಲ್ಲಿ ಸಾಯುತ್ತಾನೆ ಎಂದು ಭವಿಷ್ಯ ನುಡಿದ. ಇವೆಲ್ಲ ಭವಿಷ್ಯಗಳೂ ಠುಸ್ಆಯಿತು. ಇನ್ನೂ ತಮಾಷೆಯ ವಿಷಯವೆಂದರೆ 1999ರಲ್ಲಿ ಟಿಬಿಎನ್ನೆಟ್ವರ್ಕ್ಎಂಬ ಚಾನೆಲ್ಒಂದರಲ್ಲಿ ಕಾಣಿಸಿಕೊಂಡ ಬೆನ್ನಿ ಹಿನ್ದೇವರು ತನಗೆ ಅದ್ಭುತವಾದ ಶಕ್ತಿಯೊಂದನ್ನು ನೀಡಿದ್ದು ತನ್ನು ಬೋಧನೆ ನಡೆಯುವ ವೇಳೆ ಟಿವಿ ಪರದೆ ಮುಟ್ಟಿದರೆ ಗೋರಿಯಲ್ಲಿರುವ ನಿಮ್ಮ ಬಂಧುಗಳು ಮರುಜನ್ಮ ಪಡೆಯುತ್ತಾರೆ ಎಂದು ಹೇಳಿದ. ಅಂದರೆ ಸತ್ತ ವ್ಯಕ್ತಿಗಳು ಬಂದು ಟಿವಿ ಪರದೆಮುಟ್ಟಿದರೆ ಅವರಿಗೆ ಮರುಜೀವ ಬರುತ್ತದೆ ಎಂದು ಆತ ಪ್ರತಿಪಾದಿಸಿದ್ದ. ಇದೆಲ್ಲವೂ ದೇವೇಗೌಡರ ಅಚ್ಚುಮೆಚ್ಚಿನ ಕೋಡಿ ಮಠದ ಸ್ವಾಮಿ ಹೇಳುವ ಭವಿಷ್ಯದಷ್ಟೇ ಅಗ್ಗದ ಮತ್ತು ಹಾಸ್ಯಾಸ್ಪದ ಭವಿಷ್ಯವಾಣಿಯಾಗಿಯೇ ಉಳಿಯಿತು. ತನ್ನು ಟೀಕಾಕಾರರಿಗೆ ಈತ ಶಾಪ ಬೇರೆ ಕೊಡುತ್ತಾನೆ. ಕ್ಯಾಲಿಫೋರ್ನಿಯಾದ ಜನ ಈತನ ವಿರುದ್ಧ ಮಾತನಾಡಿದಾಗ "ನೀವು ಇದನ್ನು ದೇವರ ಸೇವಕನ ಬಾಯಿಂದ ಕೇಳಿರಿ, ನೀವು ಅಪಾಯದಲ್ಲಿದ್ದೀರಿ, ನಿಮ್ಮ ತಲೆಯ ಮೇಲಿಂದ ದೇವರ ಕೈ ಮಾಯವಾಗಲಿದೆ. ನೀವು ಸೋಲುವಿರಿ, ನಿಮ್ಮ ಮಕ್ಕಳು ನಿಮ್ಮ ಪಾಪವನ್ನು ಅನುಭವಿಸುತ್ತಾರೆ' ಎಂದೆಲ್ಲ ಬಡಬಡಾಯಿಸಿದ್ದನಂತೆ.

ಈತನ ವಂಚನೆಯಲ್ಲಿ ಈತನ ಹೆಂಡತಿ ಮತ್ತು ಮಕ್ಕಳೂ ಸಹಕಾರ ನೀಡುತ್ತಿದ್ದಾರೆ. ಒಮ್ಮೆ ತನ್ನು ಹೆಂಡತಿ ಸುಝನ್ಜೊತೆ ವಿಚ್ಛೆದನ ಪಡೆದ ಈತ ಬೇರೆ ಹೆಂಗಸರೊಡನೆ ಸಂಬಂಧ ಬೆಳೆಸಿದ. ಮತ್ತೆ ತನ್ನು ಕುಕೃತ್ಯಗಳು ಬಹಿರಂಗಕ್ಕೆ ಬರುತ್ತಿದ್ದ ಹಾಗೆ ಪುನಃ ಸುಝನ್ಳನ್ನು ಮರುಮದುವೆಯಾದ. ಅಮೇರಿಕದಲ್ಲಿ ಅತ್ಯಂತ ವೈಭವದ ಜೀವನ ನಡೆಸುತ್ತಿರುವ "ದೇವಮಾನವ' ಪ್ರತಿ ವರ್ಷ ನೂರು ಮಿಲಿಯನ್ಡಾಲರ್ಗಿಂತ ಹೆಚ್ಚು ಸಂಪಾದನೆ ಮಾಡುತ್ತಾನೆ. ಅತ್ಯಂತ ದುಬಾರಿಯಾದ ಜಾಗದಲ್ಲಿ ಈತನ ಬೃಹತ್ಮನೆ ಇದೆ. ಈತ ಓಡಾಡುವ ವಿಮಾನ ಅತ್ಯಂತ ದುಬಾರಿಯಾದವಿಮಾನ. ವಿಮಾನದ ನಿರ್ವಹಣಾ ವೆಚ್ಚವೇ ವರ್ಷಕ್ಕೆ 6 ಮಿಲಿಯನ್ಡಾಲರ್ಗಳು. ಈತನಿಗೆ ದಾನವಾಗಿ ಬರುವ ಹಣಕ್ಕೆ ಲೆಕ್ಕವಿಲ್ಲ. ಅಮೇರಿಕದ ಸರಕಾರ ಈತನ ಅಕ್ರಮ ಗಳಿಕೆ, ಲೆಕ್ಕಪತ್ರಗಳಿಲ್ಲದ ವ್ಯವಹಾರದ ವಿರುದ್ಧ ತನಿಖೆಗೆ ಆದೇಶಿಸಿದೆ. ರಾಮ್ದೇವ್ಬಾಬಾನಿಗೆ ಇವನೇ ಮಾದರಿಯಾಗಿರಬೇಕು. ಈಗ ಬೆನ್ನಿ ಹಿನ್ಎಂಬ ಮಹಾ ವಂಚಕ ಬೆಂಗಳೂರಿಗೆ ಬಂದು ಮತ್ತೊಮ್ಮೆ ಈತನ "ಭಕ್ತಾದಿಗಳಿಗೆ' ಮೋಸದ ಸ್ಪರ್ಶ ಮತ್ತು ದರ್ಶನ ನೀಡಿ ಕೋಟ್ಯಂತರ ರೂ ಕಾಣಿಕೆ ಪಡೆದು ಮರಳಲಿದ್ದಾನೆ.

ಬೆನ್ನಿ ಹಿನ್ಬೆಂಗಳೂರಿಗೆ ಬಂದು ಜನರನ್ನು ವಂಚಿಸುವುದನ್ನು ಖಂಡಿತ ತಡೆಯಬೇಕಾಗಿದೆ. ವಿಚಾರವಂತರೆಲ್ಲ ಈತನ ವಿರುದ್ಧ ದನಿ ಎತ್ತಬೇಕಾಗಿದೆ. ಜನರು ಈತ ಪ್ರಚುರಪಡಿಸುವ ಮೌಢ್ಯದಿಂದ ಹೊರಬರಬೇಕಾಗಿದೆ. ಇದೆಲ್ಲ ಸರಿ. ಆದರೆ ಬೆನ್ನಿ ಹಿನ್ಮೌಢ್ಯವನ್ನು ಬಿತ್ತುತ್ತಾನೆಂದೂ ಮತ್ತು ಕಾರಣಕ್ಕೆ ಆತನನ್ನು ಭಾರತಕ್ಕೆ ಬರಲು ಬಿಡಬಾರದೆಂದೂ ಪೇಜಾವರ ಸ್ವಾಮಿ, ಆರೆಸ್ಸೆಸ್ಗ್ಯಾಂಗ್‌, ರಾಮ್ದೇವ್ಬಾಬಾ, ಸುರೇಶ್ಕುಮಾರ್ಎಂಬ ಮಾಜಿ ಬಿಜೆಪಿ ಸಚಿವರು, ಅದೇ ಪಕ್ಷದ ಅನ್ಯ ಧುರೀಣರೂ ಬೊಬ್ಬೆ ಹೊಡೆಯುತ್ತಿರುವುದು ಮಾತ್ರ ಹಾಸ್ಯಾಸ್ಪದವಾಗಿದೆ. 24 ಗಂಟೆಗಳ ತಮ್ಮ ಕಾರ್ಯಕ್ರಮಗಳಲ್ಲಿ 3-4 ಗಂಟೆಯನ್ನು ಜ್ಯೋತಿಷ್ಯ, ವಾಸ್ತು ಎಂದು ಕಾರ್ಯಕ್ರಮ ಬಿತ್ತರಿಸುವ, ಶನಿವಾರಶಿವದೇಗುಲಕ್ಕೆ ಯಾಕೆ ಹೋಗಬಾರದು, ಸೋಮವಾರ ಹೆಂಗಸರು ಮನೆ ಹೊರಗೆ ಹೋದರೆ ಏನಾಗುತ್ತದೆ ಎಂದೆಲ್ಲ ಜ್ಯೋತಿಷಿಗಳನ್ನು ಕರೆದು ಚರ್ಚೆ ನಡೆಸುವ ಕನ್ನುಡದ ಚಾನಲ್ಗಳು ಬೆನ್ನಿ ಹಿನ್ವಿರುದ್ಧ ಜನಾಭಿಪ್ರಾಯ ರೂಪಿಸುವ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಇನ್ನೂ ತಮಾಷೆ ಅನಿಸುತ್ತಿದೆ. ಬೆನ್ನಿ ಹಿನ್ಇಲ್ಲಿಗೆ ಮತಾಂತರ ಮಾಡಲು ಬರುತ್ತಿದ್ದಾನೆ ಎಂದು ಬಿಜೆಪಿ ಮಂದಿ ಹೆದರಿಸುತ್ತಿದ್ದಾರೆ. ಇದಂತೂ ಅಪ್ಪಟ ಸುಳ್ಳು. ಬೆನ್ನಿ ಹಿನ್ಇಲ್ಲಿನ ಜನರನ್ನು ದೇವರು, ಪ್ರಾರ್ಥನೆ, ಸ್ಪರ್ಶ ಎಂದೆಲ್ಲ ವಂಚಿಸಿ ದುಡ್ಡು ಮಾಡಲಿಕ್ಕಾಗಿ ಬರುತ್ತಿದ್ದಾನೆ. ಆತ ಮತಾಂತರ ಮಾಡಿದ ಕುರಿತು ಯಾವ ದಾಖಲೆಗಳೂ ಇಲ್ಲ. ಬೆನ್ನಿ ಹಿನ್ಇಲ್ಲಿಗೆ ಬರುತ್ತಾನೆಂದ ಕೂಡಲೇ ಇಲ್ಲಿನ ಕ್ರೈಸ್ತ ಸಮುದಾಯವನ್ನೇ ಅನುಮಾನದಿಂದ ನೋಡುವುದು, ಅವರೆಲ್ಲ ಬೆನ್ನಿ ಹಿನ್ಭಕ್ತರೆಂದು ಪ್ರಚಾರ ಮಾಡುವುದು ಮತ್ತು ನೆವ ಹಿಡಿದುಕೊಂಡು ಇಲ್ಲಿನ ಕ್ರೈಸ್ತರ ಮೇಲೆ ದಾಳಿ ನಡೆಸುವುದು ಸಲ್ಲದು. ಬಿಜೆಪಿಗಳು ಇದಕ್ಕೆಲ್ಲ ತಯಾರಾಗಿ ನಿಂತಿರಬಹುದು. ಸರಕಾರ ಎಚ್ಚೆತ್ತುಕೊಳ್ಳಬೇಕು. ಎಲ್ಲ ಧರ್ಮಗಳಲ್ಲಿಯೂ ಮುಗ್ದರು, ಮೂರ್ಖರು ಇದ್ದೇ ಇರುತ್ತಾರೆ. ಅಂತಹವರು ಬೆನ್ನಿ ಹಿನ್ಸಭೆಗಳಿಗೆ ಹೋಗಬಹುದು. ಬೆನ್ನಿ ಹಿನ್ಸಭೆಗಳಿಗೆ ಹಿಂದೂಗಳು ಸಹ ಕಳೆದ ಬಾರಿ ಬಂದಾಗ ಹೋಗಿದ್ದರು.ಅದರಲ್ಲೇನು ಮಹಾ ವಿಶೇಷವಿಲ್ಲ. ನಮ್ಮ ಸ್ವಾಮೀಜಿಗಳು-ಕಾವಿಧಾರಿಗಳು-ಬಾಬಾಗಳು ಮಾಡುವ ಢೋಂಗಿ ಏನು ಕಡಿಮೆ ಇದೆಯೆ? ಭಾರತದ ತಥಾಕತಿಥ ದೇವಮಾನವರೆಲ್ಲ ಅರಬ್ದೇಶಗಳಿಗೆ, ಅಮೇರಿಕಕ್ಕೆ, ಜಪಾನಿಗೆ ಎಲ್ಲ ಹೋಗುವುದಿಲ್ಲವೆ? ಅಲ್ಲಿನ ಜನರು ಭಾರತದ ಬಾಬಾಗಳ ವಿರುದ್ಧ ಪ್ರತಿಭಟಿಸಿದ್ದಾರೆಯೆ? ಮೌಢ್ಯ ವಿರೋಧಿ ವಿಧೇಯಕದ ಪ್ರಸ್ತಾವವನ್ನೇ ವಿರೋಧಿಸುವ ಆರೆಸ್ಸೆಸ್ಗ್ಯಾಂಗ್ಗೆ ಬೆನ್ನಿ ಹಿನ್ಮೌಢ್ಯ ಬಿತ್ತುತ್ತಾರೆ ಎಂದು ಹೇಳುವ ನೈತಿಕತೆಯಾದರೂ ಎಲ್ಲಿಂದ ಬರಬೇಕು?

ಬೆನ್ನಿ ಹಿನ್ಅನ್ನು ವಿರೋಧಿಸಬೇಕು. ಆದರೆ ಅದು ವೈಚಾರಿಕ ನೆಲೆಯಲ್ಲಿ ಮಾತ್ರ. ಆತ ಬಂದು ಭಾರತವೇ ಹಾಳಾಗುತ್ತದೆ ಎಂದು ಬಾಯಿ ಬಡಿದುಕೊಳ್ಳುವ ಅಗತ್ಯವಿಲ್ಲ. ಬೆನ್ನಿ ಹಿನ್ಸೇರಿದಂತೆ ಬೆಂಗಳೂರಿನಲ್ಲಿ ನಡೆಯುವ ಎಲ್ಲ ಮೌಢ್ಯ ಬಿತ್ತುವ ಧಾರ್ಮಿಕ-ರಾಜಕೀಯ ನಾಯಕರ ಸಭೆಗಳನ್ನು ನಿಷೇಧಿಸುವ ಸಾಧ್ಯತೆಯನ್ನು ಸರಕಾರ ಯೋಚಿಸಬೇಕಾಗಿದೆ. ಬೆನ್ನಿ ಹಿನ್ಅನ್ನು ಇಷ್ಟೆಲ್ಲ ವಿರೋಧಿಸುತ್ತಲೇ ಒಂದು ಮಾತು ಹೇಳಲೇಬೇಕು. ಬೆನ್ನಿ ಹಿನ್ಬರುತ್ತಾನೆ. ಜನರಿಗೆ ಮಂಕು ಬೂದಿ ಎರಚಿ ತನ್ನು ಕೆಲಸ ಮುಗಿಸಿ ದುಡ್ಡಿನ ಚೀಲದೊಂದಿಗೆ ವಾಪಸಾಗುತ್ತಾನೆ. ಅಲ್ಲಿ ಬೆನ್ನಿ ಹಿನ್ಹಿಂದೂ ಧರ್ಮದ ವಿರುದ್ಧಮೋ, ಇಸ್ಲಾಂ ಇರುದ್ಧಮೋ ಮಾತನಾಡಲಾರ.  ಅಲ್ಲಿ ಹೋದ ಜನಗಳಿಗೆ ಬೆನ್ನಿ ಹಿನ್ಸ್ಪರ್ಶದಿಂದ ಸಮಾಧಾನವಾಗಬಹುದು ಅಥವಾ ಸ್ಪರ್ಶ ಸಿಗದೆ ಅಸಮಾಧಾನವೂ ಆಗಬಹುದು. ಆದರೆ ಅವರೆಲ್ಲ ಶಾಂತಿಯಿಂದ ಮನೆಗಳಿಗೆ ಮರಳುತ್ತಾರೆ. ಕಲ್ಲಡ್ಕ ಪ್ರಭಾಕರ ಭಟ್ಟರ ಹಾಗೆ, ಪೇಜಾವರ ಸ್ವಾಮಿಯ ಹಾಗೆ, ಮುತಾಲಿಕ್-ತೊಗಾಡಿಯನ ಹಾಗೆ ಬೆನ್ನಿ ಹಿನ್ಜನರನ್ನು ಕೆರಳಿಸುವ ಮಾತನಾಡುವುದಿಲ್ಲ ಮತ್ತು ಹಿಂದೂತ್ವವಾದಿಗಳ ಪ್ರಚೋದನೆಯ ಮಾತು ಕೇಳಿ ಮನೆಗೆ ಮರಳುವ ಬಜರಂಗಿಗಳು ಮುಸ್ಲಿಮರ ಕ್ರೈಸ್ತರ ಮನೆಗಳಿಗೆ ಬೆಂಕಿ ಹಚ್ಚಿದ ಹಾಗೆ ಬೆನ್ನಿ ಹಿನ್ಭಕ್ತರು ಅನ್ಯರ ಬದುಕನ್ನು ಹಾಳು ಮಾಡುವುದಿಲ್ಲ. ಬೆನ್ನಿ ಹಿನ್ಭಾರತಕ್ಕೆ ಬರುವುದನ್ನು ನಿಷೇಧಿಸೋಣ. ಅದಕ್ಕೂ ಮೊದಲು ನಿಷೇಧಿಸಬೇಕಾದವರು, ಬಂಧಿಸಬೇಕಾದವರು, ಜೈಲಿಗೆ ಹೋಗಬೇಕಾದವರು ಎಷ್ಟು ಜನ ನಮ್ಮ ನಡುವೆಯೆ ಇದ್ದಾರಲ್ಲ. ಅವರ ಬಗ್ಗೆಯೂ ಮಾತನಾಡಬೇಕಲ್ಲವೆ? ಬೆನ್ನಿ ಹಿನ್ಬಗೆ ಮಾತನಾಡುವ ಮೊದಲು ನಮ್ಮ ಬೆನ್ಹಿಂದೆ ಒಮ್ಮೆ ನೋಡಿಕೊಳ್ಳಬೇಕಲ್ಲವೆ?
-ಶಶಿಧರ ಹೆಮ್ಮಾಡಿ

(ಗೌರಿ ಲಂಕೇಶ್ ಪತ್ರಿಕೆಯಿ ಜನವರಿ 22, 2014ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ)

Wednesday, June 19, 2013

ಯಡಿಯೂರಪ್ಪ ಕುಂದಾಪುರಕ್ಕೆ ಬಂದರು


ಯಡಿಯೂರಪ್ಪ ಕುಂದಾಪುರಕ್ಕೆ ಬಂದರು
ಯಡಿಯೂರಪ್ಪ ಕುಂದಾಪುರಕ್ಕೆ ಬಂದರು
ಯೋಜನೆಗಳನ್ನು ತಂದರು
ಅಣೆಕಟ್ಟು, ಕಾಲೇಜು, ಬಂದರು.
ಮಗನ ಲೋಕಸಭಾ ಕ್ಷೇತ್ರ
ವಿಶೇಷ ಸವಲತ್ತಿಗೆ ಪಾತ್ರ.
ಹಲವು ಶಂಕುಸ್ಥಾಪನೆ
ಕೆಲವು ಉದ್ಘಾಟನೆ
ಪುರೋಹಿತರ ಮಂತ್ರ
ಜೆಸಿಬಿ ಯಂತ್ರ.



ಆರೋಗ್ಯ ಕೊಡಲಾಗಲಿಲ್ಲ
ಎಂದು ಶ್ರೀರಾಂ-
ಮುಲುಗದರಿ, ಮರುಗದಿರಿ.
ಇಗೋ ತಂದಿಹೆನು ಆರೋಗ್ಯ ಕಾರ್ಡು
ಜನಜನರಿಗೂ ಜನರಲ್ ವಾರ್ಡು.
ಯಡ್ಡಿ ಹೇಳಿದರು
ಚಡ್ಡಿ ಹಾಕದ ಮಕ್ಕಳ
ತಾಯಂದಿರು ಕೇಳಿದರು.


ಪತ್ರಕರ್ತರ ದಂಡು
ಕೇಳಿದ ಪ್ರಶ್ನೆಗಳ ಕಂಡು
ಮುಖದಲ್ಲಿ ಸಿಡುಕು,
ದೊರೆಗೆ ಕೋಪ ಬಂದರೆ
ಜಾಹೀರಾತಿಗೆ ಕೆಡುಕು.

ದೇವಸ್ಸ್ಥಾನ ಕಂಡಲ್ಲಿ
ಕಾರು ನಿಲುಗಡೆ
ಗ್ರಹಚಾರ ಬಿಡುಗಡೆ.
ಹರಿವಾಣ ಹಿಡಿದು ಹಲ್ಕಿರಿವ ಭಟ್ಟರು
ಆಶೀರ್ವಾದವೋ ಅಮುಲ್ ಬಟರ್ರು.


ನಗರದ ತುಂಬಲ್ಲ ಸೈರನ್ನು ಕಾರುಗಳು
ಕಟೌಟು, ಬ್ಯಾನರು, ಹೂ ಹಾರಗಳು
ಬೆಂಗಾವಲು ವಾಹನದ
ಕಂಗಾಲು ಪೊಲೀಸರು.
ಆಹಾ! ಎಷ್ಟೊಂದು ಭದ್ರತೆ
ಯಡಯೂರಪ್ಪನಿಗೆ
ಅಯ್ಯೊ! ಎಷ್ಟು ಅಭದ್ರತೆ
ನನ್ನ ಸರಕಾರಕ್ಕೆ.
ರಸ್ತೆಯಲ್ಲಿ ಧೂಳು, ಪಾರ್ಟಿ ಹೋಳು
ಮುಖದಲ್ಲಿ ಎದ್ದು ಕಾಣುವ ಗೋಳು.


ಯಡಿಯೂರಪ್ಪ ಕುಂದಾಪುರಕ್ಕ ಬಂದರು
ಗಾಂಧಿ ಮೈದಾನದಲ್ಲಿ ಸೇರಿದರು ಜನ
ದನಗಳೂ ಇದ್ದವು
ಭಾಷಣ ಶುರುವಾಯಿತು.
ಎಲವೋ ವಿಪಕ್ಷವೇ
ನನ್ನ ಮುಟ್ಟು
ಅಬ್ಬಾ! ಎಂತಹ ಸಿಟ್ಟು.
ಪಕ್ಕದಲ್ಲಿ ಶೋಭಾ-
ಯಮಾನವಾದ ಪಕ್ಷದವರೇ
ಈ ಧೈರ್ಯದ ಗುಟ್ಟು.


ಮುಗಿಯುತ್ತಿಲ್ಲ ಭಾಷಣ
ಕುಮಾರಸ್ವಾಮಿ ಕಾರಣ
ಚಚ್ಚಿದರು, ಚುಚ್ಚಿದರು
ಭಾಷಣದಲ್ಲೇ ಕಚ್ಚಿದರು
ಜನರು ಬೆಚ್ಚಿದರು. ಕಾದರು
ಹತ್ತಬೇಕು ಬೇಗ ಲಾರಿ
ಕತ್ತಲಾದರೆ ಕಾಣದು
ಊರ ದಾರಿ


ಸಿಳ್ಳೆಗಳು ಬಿದ್ದವು
ಸೊಳ್ಳೆಗಳು ಎದ್ದವು
ಯಡಿಯೂರಪ್ಪನ ಭಾಷಣ ಮುಗಿಯಿತು
ಜನರು ಚಪ್ಪಾಳೆ ತಟ್ಟಿದರು
ಚಪ್ಪಾಳೆಗಳ ನಡುವೆ ಸಿಕ್ಕು
ಹಲವು ಸೊಳ್ಳೆಗಳು ಸತ್ತವು.
ಚಪ್ಪಾಳೆ ಸಾರ್ಥಕವಾಯಿತು
ಚಪ್ಪಾಳೆ ಸಾರ್ಥಕವಾಯಿತು
ಚಪ್ಪಾಳೆ ಸಾರ್ಥಕವಾಯಿತು.
-ಶಶಿಧರ ಹೆಮ್ಮಾಡಿ
(ಇತ್ತೀಚೆಗೆ ಗೌರಿ ಲಂಕೇಶ್ ಪತ್ರಿಕ್ರ್ಯಲ್ಲಿ ಪ್ರಕಟವಾದ ನನ್ನ ಕವಿತೆ)
ಟಿಪ್ಪಣಿ: ೧.ಈ ಕವನ ಬರೆದದ್ದು ರೇಣುಕಾಚಾರ್ಯನ ತಂಡ ಯಡಿಯೂರಪ್ಪನ ಮೇಲೆ ಸಮರ ಸಾರಿದ ಸಂದರ್ಭದಲ್ಲಿ ಯಡ್ಡಿ ಕುಂದಾಪುರಕ್ಕೆ ಬಂದಾಗ.
೨. ಮಗನ ಲೋಕಸಭಾಕ್ಷೇತ್ರ ಎಂದರೆ ಯಡಿಯೂರಪ್ಪನ ಮಗ ರಾಘವೇಂದ್ರರ ಲೋಕಸಭಾ ಕ್ಷೇತ್ರಕ್ಕೆ ವ್ಯಾಪ್ತಿಯಲ್ಲಿ ಸೇರುವ ಕುಂದಾಪುರ ತಾಲೂಕಿನ ಅರ್ಧ ಭಾಗ.
-ಶಶಿಧರ ಹೆಮ್ಮಾಡಿ








Monday, June 29, 2009

ರಾತ್ರಿ, ಚಂದಿರ ಮತ್ತು ನಾನು

ಅದು ಸದ್ದಿಲ್ಲದ ನೀರವ ರಾತ್ರಿ
ಆ ರಾತ್ರಿ ಗಾಢ ಮೌನ ಕವಿದಿತ್ತು
ಯಾವ ನೆರಳೂ ಇಲ್ಲ
ಪಿಸುಮಾತುಗಳಿಲ್ಲ
ಇರಲಿಲ್ಲ ಗದ್ದಲ, ಎಲ್ಲವೂ ಸ್ತಬ್ದ.

ಆದರೆ
ಆ ರಾತ್ರಿ ಬಹಳ ಹೊತ್ತಿನ ತನಕ
ಬಂಗಲೆಯ ಎರಡನೆ ಮಹಡಿಯಲ್ಲಿ
ಮಿನುಗುತ್ತಿದ್ದ ಒಂದು ಕಿಟಕಿ
ಮತ್ತು ಆಗಸದಲ್ಲಿದ್ದ ಚಂದಿರ
ಒಬ್ಬರನ್ನೊಬ್ಬರು ನೋಡುತ್ತಲೇ ಇದ್ದವು
ರೆಪ್ಪೆ ಮಿಟುಕಿಸದೆ.

ರಾತ್ರಿ, ಚಂದಿರ ಮತ್ತು ನಾನು
ಮೂವರು ಅಲೆಮಾರಿಗಳು
ನಿನ್ನ ತೇವಗೊಂಡ ಕಣ್ಣುಗಳಲ್ಲಿ
ಹೊತ್ತು ಕಳೆಯುತ್ತಿದ್ದೇವೆ.

ಚಂದಿರ; ಮತ್ತೆ ಮುಡಿದ್ದಾನೆ
ಎಚ್ಚರಿಕೆಯಿಂದ
ನೀನು ತಣ್ನನೆಯ ನಡುರಾತ್ರಿ
ಕಿಟಕಿಯ ಬಳಿ ಬರುತ್ತಿಯಲ್ಲ
ಹಾಗೆ!
ಚಂದಿರನಿಗೂ ಭೂಮಿಗೂ
ಅದೇನೋ ಸೆಳೆತವಿರಬಹುದೆ?

ರಾತ್ರಿ, ಚಂದಿರ ಮತ್ತು ನಾನು
ದಿನವೂ ಭೇಟಿಯಾಗುತ್ತೇವೆ
ನಿನ್ನ ದನಿಯಲ್ಲೇ ಮಾತನಾಡುತ್ತೇವೆ
ಬಹು ದೂರದ ತನಕ

ನಕ್ಷತ್ರಗಳು ಚಂದಿರನ ದೋಣಿಯಲ್ಲಿ
ರಾತ್ರಿಯನ್ನು ಹೊತ್ತು ತಂದಿವೆ
ಬೆಳಕು ಹರಿಯುವುದರೊಳಗೆ
ಎಲ್ಲವೂ ಬಿಕರಿಯಾಗುತ್ತವೆ
ಬೆಳದಿಂಗಳ ವ್ಯಾಪಾರ
ಈ ದಿನಗಳಲ್ಲಿ ಸೊಗಸಾಗಿದೆ.

ನದಿಯ ನೀರಿನ ಜುಳುಜುಳು
ಅದೇನೊ ಹೇಳುತ್ತಿದೆ
ಅಂಬಿಗರು ದಡಬಿಟ್ಟು
ಬಹಳ ಹೊತ್ತಾಗಿದೆ
ಬಾ, ಚಂದಿರನ ದೋಣಿಯಲಿ
ಆ ದಡಕ್ಕೆ ಸಾಗೋಣ.

ರಾತ್ರಿ, ಚಂದಿರ ಮತ್ತು ನಾನು
ಚಳಿಚಳಿಯ ನದಿಯ
ತಣ್ಣನೆಯ ನೀರಿನಲ್ಲಿ ಮುಳುಗಿ
ಹೊಳೆ ದಾಟುತ್ತಿರುತ್ತೇವೆ.
ಮೂಲ: ಗುಲ್ಝಾರ್
ಕನ್ನಡಕ್ಕೆ: ಶಶಿಧರ ಹೆಮ್ಮಾಡಿ

Friday, August 15, 2008

ನೆನಪುಗಳ ಜಾಡು ಹಿಡಿದು ಮತ್ತೆ ಬರುವೆಯ ನನ್ನ ಹಾಡುಗಾರ?

ಆತ ಮತ್ತೆ ಮತ್ತೆ ಏಕೆ ನೆನಪಾಗುತ್ತಾನೆ? ನನ್ನ ಮನದ ಮೂಲೆಯಲ್ಲಿ ಅವನ ಅಂತಹ ಚಿತ್ರವೊಂದು ಅಚ್ಚಳಿಯದೆ ಯಾಕೆ ಹಾಗೆಯೆ ಉಳಿದುಕೊಂಡಿದೆ? ಆತ ಯಾರು? ಎಲ್ಲಿಯವನು? ಎಂಬ ಪ್ರಶ್ನೆಗಳಿಗೆ ನನ್ನ ಬಳಿ ಸಮರ್ಪಕ ಉತರಗಳಿಲ್ಲ. ಆದರೂ ಆತ ಹೀಗೆಯೇ ನೆನಪಾಗುತ್ತಾನೆ, ಕಾಡುತ್ತಾನೆ.
ನಾನಾಗ ಪ್ರೈಮರಿಯಲ್ಲಿ ಓದುತ್ತಿದ್ದೆ. ಡಿಸೆಂಬರ್ ತಿಂಗಳ ಚಳಿಯ ಒಂದು ದಿನ ಬೆಳಿಗ್ಗೆ ಆತನನ್ನು ನಾನು ಮೊದಲ ಬಾರಿ ನೋಡಿದ್ದು. ಹಾಸಿಗೆಯಿಂದ ಎದ್ದು ಕಣ್ಣುಜ್ಜಿಕೊಳ್ಳುತ್ತ ಹೊರಬಂದೆ. ನನ್ನ ತಂದೆ ನಡೆಸುತ್ತಿದ್ದ ಕ್ಯಾಂಟೀನಿನ ಮೊದಲ ಬೆಂಚಿನಲ್ಲಿ ಆತ ಕುಳಿತಿದ್ದ. ನೀಳಕಾಯದ ವ್ಯಕ್ತಿ. ಕೋಲು ಮುಖ. ಮುಖದಲ್ಲಿ ಅಲ್ಲಲ್ಲಿ ಅಸ್ತವ್ಯಸ್ತ ಚದುರಿದ ಗಡ್ಡ, ಕೊಳಕು ಜುಬ್ಬ, ಅದರ ಮೇಲೆ ಒಂದೊ ಎರಡೊ ಕೋಟು, ಅಷ್ಟೆ ಕೊಳಕಾದ ಪಾಯಿಜಾಮ ಧರಿಸಿದ್ದ. ಕೂದಲಿಗೆ ಎಣ್ಣೆ ಹಚ್ಚಿ ನೀಟಾಗಿ ಬಾಚಿಕೊಂಡಿದ್ದ. ನಮ್ಮೂರಿನಲ್ಲಿ "ಇಮಾಮ್ ಸಾಯ್ಬ್ರು" ಎಂದು ನಾವು ಕರೆಯುತ್ತಿದ್ದ ವ್ಯಕ್ತಿಗೂ ಈ ವ್ಯಕ್ತಿಗೂ ಹೆಚ್ಚಿಗೆ ವ್ಯತ್ಯಾಸ ನನಗೆ ಕಾಣಲಿಲ್ಲ. ಇಮಾಮ್ ಸಾಯ್ಬ್ರು ದಪ್ಪ ಬೆಲ್ಟ್ ಹಾಕಿ ಲುಂಗಿ ಧರಿಸುತ್ತಿದ್ದರು ಅಷ್ಟೆ (ಆ ಬೆಲ್ಟಿನಲ್ಲಿಯೇ ಅವರ ಪರ್ಸ್ ಕೂಡ ಇರುತ್ತಿತ್ತು, ಜೊತೆಗೆ ಪುಡಿ ಅಂಡೆ, ಬೀಡಿ ಕಟ್ಟು ಇತ್ಯಾದಿ). ಈ ಹೊಸ ಇಮಾಮ ಎಲ್ಲಿಂದ ಬಂದ ಅಂತ ನಾನು ಯೋಚಿಸುತ್ತಿರುವಂತೆಯೆ ಆತ ನನ್ನನ್ನು ನೋಡಿ ಬಾಯ್ತುಂಬಾ ನಕ್ಕು ಬಿಟ್ಟ. ನಾನೂ ನಕ್ಕೆ. ಆತನ ನಗು ಮಾತ್ರ ನಿಲ್ಲಲೇ ಇಲ್ಲ. ಆತ ಮರಾಠಿಯಲ್ಲಿ (ಮರಾಠಿ ಎಂದು ತಿಳಿದದ್ದು ಆಮೇಲೆ) ಇದೇನು ಎಂದು ನನ್ನ ಮುಖದತ್ತ ಬೆಟ್ಟು ಮಾಡಿ ಕೇಳಿದ. ನಾನು ಕನ್ನಡಿಯೆದುರು ಬಂದು ಮುಖ ನೋಡಿಕೊಂಡೆ. ರಾತ್ರಿ ಮಲಗುವ ಮೊದಲು ಅಕ್ಕನ ಬಿಂದಿ ಸ್ಟಿಕ್ಕರ್‍ಗಳ ಇಡೀ ಪ್ಯಾಕೆಟ್ ಒಡೆದು ಮುಖದ ತುಂಬೆಲ್ಲ ಮೆತ್ತಿಕೊಂಡು ಮಲಗಿದ್ದೆ. ಅಂದಿನ ಆತನ ಆ ನಗು ಇಂದಿಗೂ ನೆನಪಿದೆ. ಆ ನಗುವಿನಿಂದಲೆ ಆತ ನಮ್ಮವನಾಗಿಬಿಟ್ಟಿದ್ದ.
ನನಗೆ ಹೆಸರೇ ಗೊತ್ತಿಲ್ಲದ ಮಾಹಾರಾಷ್ಟ್ರದ ಒಂದು ಹಳ್ಳಿಯವನು ಆತ. ಅಂದಿನ ಕಾಲದ ಉದ್ದನೆಯ ಅಟ್ಲಾಸ್ ಸೈಕಲ್‌ನಲ್ಲಿ ಆತ ಊರೂರು ಸುತ್ತುತ್ತಿದ್ದ. ಬರೀ ಸುತ್ತುತ್ತಿರಲಿಲ್ಲ. ಹಳ್ಳಿ ಹಳ್ಳಿಯ ಮೂಲೆಗಳಲ್ಲಿ ಮರಾಠಿ ಲಾವಣಿ ಪದ್ಯಗಳನ್ನು ಹಾಡಿ ರಂಜಿಸುತ್ತಿದ್ದ. ಅದು ಆತ ನೆಚ್ಚಿಕೊಂಡ ಕಾಯಕ. ಎಲ್ಲಿ ನಾಲ್ಕು ಜನ ಸೇರುತ್ತಾರೆಂದರೆ ಅಲ್ಲಿ ಆತ ಹಾಡಲು ಶುರುಮಾಡುತ್ತಿದ್ದ. ಕರ್ನಾಟಕದ ಮೂಲೆ ಮೂಲೆಯ ಶಾಲೆಗಳಲ್ಲಿ, ಸಂಘ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಆತ ಹಾಡಿದ ಲಾವಣಿಗಳು ಅದೆಷ್ಟೊ. ಹಾಡುವುದು ಅನಿವಾರ್ಯ ಕರ್ಮನನಗೆ ಎಂದು ಹಾಡುತ್ತಿರಲಿಲ್ಲ ಆತ. ತೀವೃವಾಗಿ ಅನಿಭವಿಸಿ ಹಾಡುತ್ತಿದ್ದ. ಎದೆಯಾಳದಿಂದ ಹಾಡುತ್ತಿದ್ದ. ತೃಪ್ತಿಗಾಗಿ ಹಾಡುತ್ತಿದ್ದ. ಸುಖಕ್ಕಾಗಿ ಹಾಡುತ್ತಿದ್ದ ಮತ್ತು ಹಾಡುತ್ತಲೇ ಇರುತ್ತಿದ್ದ.
ಅದೇಕೊ ಆ ನಗುವಿನ ನಂತರ ಆತನ ಮತ್ತು ನಮ್ಮ ಸಂಬಂಧ ಬೆಳೆಯುತ್ತಾ ಹೋಯಿತು. ಆತ ನಮ್ಮ ಸ್ನೇಹಿತನಾದ, ಬಂಧುವಂತಾಗಿಬಿಟ್ಟ. ವರ್ಷಕ್ಕೆ ಮೂರ್ನಾಲ್ಕು ಬಾರಿ ಈ ದಾರಿಯಲ್ಲಿ ಸಾಗುತ್ತಿದ್ದ. ಇತ್ತ ಕಡೆ ಬಂದಾಗಲೆಲ್ಲ ನಮ್ಮ ಮನೆಗೆ ಬರುತ್ತಿದ್ದ. ಬಂದರೆ ಆತ ನಮ್ಮೊಡನೆ ಇರುತ್ತಿದ್ದುದು ಕೆಲ ಗಂಟೆಗಳ ಕಾಲ ಮಾತ್ರ. ಆದರೂ ಆ ಕ್ಷಣಗಳು ಎಷ್ಟೊಂದು ಸುಂದರವಾಗಿದ್ದವು. ರೋಮಾಂಚಕವಾಗಿದ್ದವು. ದಾರಿಯ ಮಧ್ಯದಲ್ಲಿ ಎಲ್ಲೋ ಒಂದೆಡೆ ಕುಳಿತು ತನಗಾಗಿ ತಾನೇ ಚಪಾತಿ ತಯಾರಿಸಿಕೊಳ್ಳುತಿದ್ದ. ನಮ್ಮ ಮನೆಯಲ್ಲಿ ಬಂದರೆ ಆತ ತೆಗೆದುಕೊಳ್ಳುತ್ತಿದ್ದುದು ಸ್ವಲ್ಪ ಪಲ್ಯವೊ ಸಾಂಬಾರೋ ಮಾತ್ರ.
ಕನ್ನಡ ಆತನಿಗೆ ಬರುತ್ತಿರಲಿಲ್ಲ. ಮರಾಠಿಯಲ್ಲಿ ನಮ್ಮ ಜೊತೆ ಮಾತನಾಡುತ್ತಿದ್ದ. ಮನೆ ಮಾತು ಕೊಂಕಣಿಯಾದ ಕಾರಣ ಆತನ ಭಾಷೆ ಅಲ್ಪಸ್ವಲ್ಪ ಅರ್ಥವಾಗುತ್ತಿತ್ತು. ಆದರೆ ಆತನ ಜೊತೆ ನಾವು ಪ್ರೀತಿಯಿಂದಿದ್ದದ್ದು, ಸಲುಗೆ ಪಡೆದದ್ದು, ಮತ್ತೆ ಆತ ನಮ್ಮನ್ನು ಆವರಿಸಿದ್ದು ಆತನ ಹೃದಯದ ಭಾಷೆಯಿಂದ. ಪ್ರೀತಿಯಿಂದ ನನ್ನನ್ನು "ಭಾಚ್ಚಾ" ಎಂದೂ ನನ್ನಕ್ಕನನ್ನು "ಭಾಚ್ಚಿ" ಎಂದೂ ಕರೆಯುತ್ತಿದ್ದ. ನಮ್ಮ ಅಮ್ಮನ ಬಗ್ಗೆ ಅಪಾರ ಗೌರವ ಹೊಂದಿದ್ದ. ಅಪ್ಪನಿಗೆ ಪ್ರತಿ ಬಾರಿಯೂ ಸಾಂಬಾರಿನ ಹಣ ತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತಿದ್ದ. ಆತನ ಸೈಕಲ್‌ಗೆ ಗಾಳಿ ಹಾಕುವುದು ಆಗ ನನಗೆ ಬಲು ಇಷ್ಟದ ಕೆಲಸ.
ಒಮ್ಮೆ ನಮ್ಮ ಶಾಲೆಗೂ ಆತ ಹಾಡಲು ಬಂದಿದ್ದ. ಮಕ್ಕಳಿಂದ ನಾಲ್ಕಾಣೆ, ಎಂಟಾಣೆ ವಸೂಲಿ ಮಾಡಿ ಆಗಾಗ ಮೇಷ್ಟ್ರುಗಳು ನಮ್ಮ ಶಾಲೆಯಲ್ಲಿ ಕಾರ್ಯಕ್ರಮ ಮಾಡುತ್ತಿದ್ದರು. ಈ ಬಾರಿ ಈ ನನ್ನ ಹಾಡುಗಾರ ಮಾಮ ನನ್ನ ಶಾಲೆಗೇ ಬಂದಿದ್ದ. ನನಗಂತೂ ಖುಷಿಯೋ ಖುಷಿ.ನಮ್ಮ ಮನೆಯವರೆ ಯಾರೊ ಹಾಡುತ್ತಿದ್ದಾರೆ ಎಂಬಷ್ಟು ಖುಷಿ. ಈಗ ಶಾಲೆಯಲ್ಲಿ ಹಾಡು ಹಾಡಲು ಬಂದವರು ನನಗೆ ಬಹಳ ಆತ್ಮೀಯರು ಎಂಬ ಹಮ್ಮನ್ನು ನಾನು ನನ್ನ ಗೆಳೆಯರೊಡನೆ ಪ್ರದರ್ಶಿಸಿಯೂ ಇದ್ದೆ. ಆತ ಒಂದುವರೆ ಗಂಟೆಗಳ ಕಾಲ ಹಾಡಿದ. ನನಗಾಗಲಿ, ನನ್ನ ಮೇಷ್ಟುಗಳಿಗಾಗಲಿ ಅಥವಾ ನನ್ನಂತೆ ಕೈ ಬಾಯಿ ಕಟ್ಟಿಕೊಂಡು ಪಿಳಿ ಪಿಳಿ ನೋಡುತ್ತಾ ಕುಳಿತುಕೊಂಡಿದ್ದ ನನ್ನಂತಹ ಮಕ್ಕಳಿಗಾಗಲಿ ಆ ಹಾಡುಗಳು ಅರ್ಥವಾಗುತ್ತಿರಲಿಲ್ಲ. ಇತರರು ಏನಂದುಕೊಂಡರೊ ಗೊತ್ತಿಲ್ಲ. ನಾನಂತೂ "ಎಷ್ಟು ಚೆನ್ನಾಗಿ ಹಾಡಿದ್ದಾನಲ್ಲ" ಎಂದು ಎಲ್ಲರ ಬಳಿಯೂ ಹೇಳಿ ಉಬ್ಬಿ ಹೋಗಿದ್ದೆ.
ಆತ ಹಾಡು ಹೇಳುವ ವೃತ್ತಿಯನ್ನು ಯಾಕೆ ನೆಚ್ಚಿಕೊಂಡ? ಅದೂ ಸಹ ಹೀಗೆ ಊರೂರು ಸುತ್ತಿ ಹಾಡಿ ರಂಜಿಸುವ ಕಾಯಕ ಆತ ಏಕೆ ಮಾಡುತ್ತಿದ್ದ ಎಂದು ನನಗೆ ಅರ್ಥವಾಗುತ್ತಿರಲಿಲ್ಲ. ಆತ ಅಂದು ಹಾಡಿದ ಹಾಡುಗಳು ನನಗೆ ನೆನಪಿಲ್ಲ. ಆದರೆ ಆತನ ಮುಖದಲ್ಲಿ ಮೂಡುತ್ತಿದ್ದ ಎಕ್ಸ್‌ಪ್ರೆಶನ್‌ಗಳು ಇಂದಿಗೂ ನನಗೆ ಮರೆಯಲಾಗದ್ದು. ೪೦ ದಾಟಿದವನಂತೆ ಕಾಣುತ್ತಿದ್ದ. ಆತನಿಗೆ ಮದುವೆಯಾಗಿರಲಿಲ್ಲ ಎಂದು ನನಗಾಗ ತಿಳಿದಿತ್ತು.
ಆತನ ವಿಳಾಸ ಬರೆದುಕೊಳ್ಳಬೇಕೆಂಬ ಬುದ್ದಿ ಇರುವ ವಯಸ್ಸು ಅದಾಗಿರಲಿಲ್ಲ. ಆತ ಯಾವಾಗ ಊರಿಗೆ ಹೋಗುತ್ತಾನೆ ಅಥವಾ ಯಾವತ್ತು ಅಲ್ಲಿಂದ ಹೊರಡುತ್ತಾನೆ ಎಂಬ ಪ್ರಶ್ನೆಗಳನ್ನು ನಾನು ಕೇಳಿರಲಿಲ್ಲ. ಎಷ್ಟೊಂದು ದಡ್ಡನಿದ್ದೆ ಆಗ ಅಂತ ನಂತರ ಹಲವು ಬಾರಿ ಅನಿಸಿದ್ದಿದೆ.
ಒಂದು ನಗು ಒಂದೆರಡು ಮಾತು, ಅಕ್ಕರೆ , ಹೃದಯವಂತಿಕೆ ಇಂತಹ ಎಷ್ಟೊ ಸಂಬಂಧಗಳಿಗೆ ನಾಂದಿಯಾಗಬಹುದು. ಎಷ್ಟೊಂದು ಸ್ನೇಹ, ಪ್ರೀತಿ ನಮ್ಮ ದಾರಿಯಲ್ಲಿ ಎದುರಾಗಬಹುದು. ಸ್ವತಃ ತೆರೆದುಕೊಳ್ಳುವವರಿಗೆ ಹಲವಾರು ಬಾಗಿಲುಗಳು ತೆರೆಯುತ್ತವೆ. ೧೫-೨೦ ವರ್ಷಗಳ ಹಿಂದೆ ಇದ್ದಂತೆ ಈಗ ಇಲ್ಲ. ಇಂದು ಪ್ರಜ್ಞಾಪೂರ್ವಕವಾಗಿ ಎಲ್ಲವನ್ನೂ ಅನುಮಾನದಿಂದಲೇ ನೋಡುತ್ತೇವೆ ನಾವು. ಆಗ ಪೇಟೆ ಪಟ್ಟಣಗಳಲ್ಲಿ ಮಾತ್ರ ಹಗಲು ಹೊತ್ತಿನಲ್ಲೂ ಮನೆಗಳ ಬಾಗಿಲು ಮುಚ್ಚಿಕೊಂಡಿರುತ್ತಿತ್ತು. ಈಗ ಹಳ್ಳಿಗಳಲ್ಲೂ ಇದೇ ರೋಗ ಬಂದು ಬಿಟ್ಟಿದೆ. ಮನೆ ಮಂದಿ ಹೊರಗೆ ಹೋಗುವಾಗ ಮತ್ತು ಒಳಗೆ ಬರುವಾಗ ಮಾತ್ರ ತೆರೆಯುವ ಕದಗಳು ಇನ್ನುಳಿದಂತೆ ಸದಾ ಮುಚ್ಚಿಯೇ ಇರುವಂಥವು. ಯಾರಾದರೂ ಬಂದರೆ ಮೊದಲು ಬಾಗಿಲ ನಡುವಿನ ಚಿಕ್ಕ ರಂಧ್ರದಲ್ಲಿ ಇಣುಕಿ ಮತ್ತೆ ಬಾಗಿಲು ತೆಗೆಯುವ ಅಥವಾ ತೆರೆಯದೆ ಇರುವ ಸ್ವಾತಂತ್ರ್ಯವನ್ನು ಕಾಯ್ದುಕೊಂಡಿರುತ್ತಾರೆ. ಈಗಿಗ ನಮ್ಮ ಜನರ ಮನಸ್ಸುಗಳು ಕೂಡ ಮುಚ್ಚಿದ ಬಾಗಿಲುಗಳ ಮನೆಗಳ ರೀತಿಯೇ ಆಗಿವೆ.
If you judge people you will have no time to love them.ನೀವು ಕೇವಲ ವಿಮರ್ಶೆ ಮಾಡುತ್ತಾ ಕುಳಿತಿರುತ್ತೀರಿ ಅಷ್ಟೆ.
ಅಂದು ಕೊನೆಯದಾಗಿ ಆತ ಬಂದಿದ್ದ. ಅದೇ ಕೊನೆ ಅಂತ ನನಗೆ ಆಗ ಅನಿಸಿರಲಿಲ್ಲ. ಆಥವಾ ಈಗಲೂ ಅನಿಸುತ್ತಿಲ್ಲ. ಅಂದು ನನ್ನ ಜೊತೆ ತುಂಬಾ ಹೊತ್ತು ಕಳೆದಿದ್ದ. ಸಂಜೆ ಸುಮಾರು ನಾಲ್ಕು ಗಂಟೆಯ ಹೊತ್ತಿಗೆ ಸೈಕಲ್ ಏರಿ ಟಾಟಾ ಹೇಳುವ ಮೊದಲು ಮುಂದಿನ ಬಾರಿ ಬರುವಾಗ ನಿನಗಾಗಿ ಮಾಮಿಯನ್ನು ತರುತ್ತೇನೆ ಎಂದು ಹೇಳಿದ್ದ. ಮದುವೆ ಮಾಡಿಕೊಳ್ಳುತ್ತಿದ್ದೇನೆ ಎಂದು ಅಮ್ಮನಲ್ಲಿ ಹೇಳಿದ್ದ. ಅಂದು ನನ್ನಿಂದ ದೂರವಾದ ಹಾಡುಗಾರ ಮತ್ತೆ ಮರಳಿ ಬರಲಿಲ್ಲ. ಆತ ಎಲ್ಲಿ ಹೋದ? ನನ್ನ ಪ್ರೀತಿಯ ಹಾಡುಗಾರ ಎಲ್ಲಿದ್ದಾನೆ ಈಗ? ಹಳ್ಳಿಹಳ್ಳಿಗೂ ಲಾವಣಿ ಹಾಡಲು ಇನ್ನೂ ಹೋಗುತ್ತಿದ್ದಾನೆಯೆ?ದಣಿದಿರುವನೆ? ಮುದುಕನಾಗಿರುವನೆ? ಮದುವೆ ಮಾಡಿಕೊಂಡು ಮಾಮಿಯೊಂದಿಗೆ ಸುಖವಾಗಿರುವನೆ? ನಿಮಗೆ ಗೊತ್ತಾ ನನ್ನ ಹಾಡುಗಾರ ಎಲ್ಲಿ ಹೋದ?
ಅದೇಕೊ ಇಂದು ನನ ಹಾಡುಗಾರ ತುಂಬಾ ನೆನಪಾದ. ಏನೋ ಬರೆಯಬೇಕೆಂದಿದ್ದವನು ಥಟ್ಟನೆ ಹಾಡುಗಾರನ ನೆನಪಾಗಿ ಬರೆಯಲು ಕುಳಿತೆ. ನನ್ನ ಹಾಡುಗಾರ ಮತ್ತೆ ಬರಬಹುದು, ಮತ್ತೆ ಲಾವಣಿ ಹಾಡಬಹುದು. ಎಂದಾದರೊಂದು ದಿನ ಪುನಃ ಬಂದು ಭಾಚ್ಚಾ ಎಂದು ನನ್ನನು ಕರೆಯಬಹುದು ಅದೇ ಹಳೆಯ ಅಕ್ಕರೆಯಿಂದ. ಕಳೆದು ಹೋದ ದಿನಗಳ ನೆನಪುಗಳ ಜಾಡು ಹಿಡಿದು ಮತ್ತೆ ಬಾರನೇ ನನ್ನ ಹಾಡುಗಾರ?

ನಿಮ್ಮವನು
ಶಶಿಧರ ಹೆಮ್ಮಾಡಿ

Tuesday, August 12, 2008

ಒಹೋ ಮಳೆ ಮಳೆ ಮಳೆ....
ಹಾಯ್! ಹೇಗಿದ್ದೀರಾ? ಈ ಬ್ಲಾಗ್ ಶುರು ಮಾಡಿ ಕೆಲವು ಸಮಯ ಆಯ್ತು. ಆದರೆ ಬರೆಯೋಕೆ ಸಮಯಾನೆ ಇಲ್ಲ! ಅಥವಾ ಆಸಕ್ತಿ ಇಲ್ಲ?.. ಏನೋ ನಂಗೆ ಗೊತ್ತಿಲ್ಲ. ಮತ್ತೆ ಇನ್ನೊಂದ್ ವಿಷಯ ಏನಂದ್ರೆ ಈ ಬ್ಲಾಗ್ ಹೇಗೆ ಸ್ವಲ್ಪ ಚೆನ್ನಾಗಿ ಕಾಣಿಸೋ ಹಾಗೆ ಮಾಡೋದು ಅಂತ ಸಹ ನಂಗೆ ಗೊತ್ತಿಲ್ಲ. ಆದ್ರೂ ಈಗ ಬರೆಯೋಕೆ ಶುರು ಮಾಡಿದ್ದೀನಿ.

ಈಗ ನಮ್ಮೂರಲ್ಲಿ ಎಂಥ ಮಳೆ ಅಂದ್ರೆ ಅಂಥ ಮಳೆ! ಧೋ ಅಂತ ಜಲಪಾರ ಭೋರ್ಗೆರೆದ ಹಾಗೆ ವರ್ಷಧಾರೆ ಸುರೀತಾ ಇದೆ. ಎಲ್ಲೆಲ್ಲೂ ನೀರು. ರಸ್ತೆಲಿ, ನದಿಯಲ್ಲಿ, ಕೆರೆಯಲ್ಲಿ, ಮನೆಯೊಳಗೆ ಎಲ್ಲೆಲ್ಲೂ ನೀರು. ಮೊನ್ನೆ ರಾತ್ರಿ ಸುಂಟರ ಗಾಳಿ ೫ ನಿಮಿಷ ಸುಳಿದು ಹೋಯ್ತು ನೋಡಿ. ಅಬ್ಬ! ಎಷ್ಟು ಹಾನಿ ಮಾಡಿ ಹೋಯ್ತು ಅಂದ್ರೆ ನೂರಾರು ಮನೆಗಳ ಛಾವಣಿ ಹಾರಿ ಹೋಗಿವೆ. ಸಾವಿರಾರು ಮರಗಳು, ಅದರಲ್ಲೂ ಫಲ ನೀಡುವ ತೆಂಗಿನ ಮರಗಳು ಮುರಿದು ಬಿದ್ದಿವೆ. ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ. ಕೆಲವೆಡೆ ಕರೆಂಟ್ ವಾಪಸ್ ಬರೋಕೆ ಇನ್ನು ೧೫ ದಿನ ಆದ್ರೂ ಬೇಕು.
ಜನ ಸಾಮಾನ್ಯರ ಈ ಸಂಕಟಗಳ ನಡುವೆಯೂ ಈ ಮಳೆಯನ್ನ ಆನಂದಿಸ್ತಾ ಇದೀನಿ. ತುಂಬಾ ಛಳಿ ಇದೆ.